21 September 2026 |

ಕರಾವಳಿಯಲ್ಲಿ ಕೆಲ ಪ್ರದೇಶಗಳಲ್ಲಿ ಮಳೆ ಅಬ್ಬರ: ಸುಳ್ಯದಲ್ಲಿ 98 ಮಿ.ಮೀ., ಕಾರ್ಕಳದ ನೀರೆಯಲ್ಲಿ 97.5 ಮಿ.ಮೀ. ಮಳೆ ದಾಖಲೆ

  • 28 Jul 2026 01:11:12 PM

ಮಂಗಳೂರು: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಜುಲೈ 27ರ ಬೆಳಿಗ್ಗೆ 8.30ರಿಂದ ಜುಲೈ 28ರ ಬೆಳಿಗ್ಗೆ 7.30ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಈ ಅವಧಿಯಲ್ಲಿ ರಾಜ್ಯದ 61 ಟೆಲಿಮೆಟ್ರಿಕ್ ಮಳೆಮಾಪನ ಕೇಂದ್ರಗಳಲ್ಲಿ 50 ಮಿ.ಮೀ.ಗಿಂತ ಅಧಿಕ ಮಳೆ ದಾಖಲಾಗಿದೆ.

 

ಕರಾವಳಿ ಭಾಗಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಲವು ಕಡೆ ಭಾರೀ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ದೇವಚಳ್ಳದಲ್ಲಿ 98 ಮಿ.ಮೀ. ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನೀರೆಯಲ್ಲಿ 97.5 ಮಿ.ಮೀ. ಮಳೆ ದಾಖಲಾಗಿದೆ. ಅಲ್ಲದೆ ಕಾರ್ಕಳದ ರೆಂಜಾಲ (81.5 ಮಿ.ಮೀ.), ಸನೂರು (67.5), ಮೂಡಾರು (60.5), ಮಾಳ (57.5), ನಿಟ್ಟೆ (54), ನಲ್ಲೂರು (54.5), ಶಿರ್ಲಾಲು (53)ಸೇರಿದಂತೆ ಹಲವು ಪ್ರದೇಶಗಳಲ್ಲಿ ಗಮನಾರ್ಹ ಮಳೆಯಾಗಿದೆ.

 

ಕುಂದಾಪುರ ತಾಲೂಕಿನ ಹಾರ್ದಳ್ಳಿ-ಮಂಡಳ್ಳಿ (69.5), ಮೊಳಹಳ್ಳಿ (69.5), ಅಂಪಾರು (66), ಬಿಜಾಡಿ (62.5), ಹೆಂಗವಳ್ಳಿ (58), ಹಲಾಡಿ (54.5) ಸೇರಿದಂತೆ ಅನೇಕ ಕೇಂದ್ರಗಳಲ್ಲೂ ಉತ್ತಮ ಮಳೆಯಾಗಿದೆ.

 

ರಾಜ್ಯದಲ್ಲಿ ಅತಿ ಹೆಚ್ಚು 101.5 ಮಿ.ಮೀ. ಮಳೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನಾಗರಬಸ್ತಿಕೇರಿಯಲ್ಲಿ ದಾಖಲಾಗಿದ್ದು, ನಂತರ ಸಿದ್ದಾಪುರದ ದೊಡ್ಡಮನೆ (99.5 ಮಿ.ಮೀ.), ಸುಳ್ಯದ ದೇವಚಳ್ಳ (98 ಮಿ.ಮೀ.) ಹಾಗೂ ಕಾರ್ಕಳದ ನೀರೆ (97.5 ಮಿ.ಮೀ.) ಪ್ರದೇಶಗಳು ಸ್ಥಾನ ಪಡೆದಿವೆ.

 

ಒಟ್ಟಾರೆ, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಿರುವುದನ್ನು KSNDMC ಅಂಕಿಅಂಶಗಳು ಸೂಚಿಸಿವೆ.

 

ಮೂಲ: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC)