ಚಿಕ್ಕಮಗಳೂರು: ಕಾಡುಹಂದಿ ಬೇಟೆಯ ಉದ್ದೇಶದಿಂದ ಅಕ್ರಮವಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೆಳಕಿಗೆ ಬಂದಿದ್ದು, ಬಳಿಕ ಪ್ರಕರಣವನ್ನು ಮರೆಮಾಚಲು ಮೃತದೇಹವನ್ನು ರಹಸ್ಯವಾಗಿ ಹೂತುಹಾಕಿದ ಆರೋಪದಡಿ ಮೂವರನ್ನು ಯಗಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೊಣ್ಣೆಕೋರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರು ಗ್ರಾಮದ 55 ವರ್ಷದ ಕರಿಯಪ್ಪ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಚಂದ್ರಪ್ಪ, ಕೆಂಚಪ್ಪ ಹಾಗೂ ಯದುಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಕಾಡುಹಂದಿ ಬೇಟೆಗಾಗಿ ಹೊಲದ ಸಮೀಪ ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಿದ್ದರು. ಇದೇ ವೇಳೆ ಆ ಮಾರ್ಗವಾಗಿ ತೆರಳಿದ್ದ ಕರಿಯಪ್ಪ ಅವರು ತಿಳಿಯದೆ ಆ ತಂತಿಯನ್ನು ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಬಳಿಕ ಆತಂಕಗೊಂಡ ಆರೋಪಿಗಳು ತಮ್ಮ ಕೃತ್ಯ ಬಯಲಾಗದಂತೆ ಮೃತದೇಹವನ್ನು ಯಾರಿಗೂ ತಿಳಿಯದ ಸ್ಥಳದಲ್ಲಿ ಹೂತುಹಾಕಿ, ಪ್ರಕರಣದ ಸಾಕ್ಷ್ಯಾಧಾರಗಳನ್ನು ನಾಶಪಡಿಸಲು ಯತ್ನಿಸಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
ಇತ್ತ ಕರಿಯಪ್ಪ ಅವರು ಮನೆಗೆ ಮರಳದೇ ಇದ್ದ ಕಾರಣ ಕುಟುಂಬದವರು ಹಾಗೂ ಸಂಬಂಧಿಕರು ಹಲವು ಕಡೆ ಹುಡುಕಾಟ ನಡೆಸಿದರು. ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಯಗಟಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಕುರಿತು ದೂರು ದಾಖಲಿಸಲಾಯಿತು.
ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ವೇಳೆ ಪ್ರಕರಣದ ನಿಜಸ್ವರೂಪ ಬಹಿರಂಗವಾಯಿತು. ನಂತರ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಘಟನೆಗೆ ಸಂಬಂಧಿಸಿದ ಮಹತ್ವದ ಮಾಹಿತಿ ದೊರೆತಿದ್ದು, ಮೂವರನ್ನೂ ಬಂಧಿಸಲಾಯಿತು.
ಪ್ರಕರಣದ ಮಾಹಿತಿ ಗ್ರಾಮದಲ್ಲಿ ಹರಡುತ್ತಿದ್ದಂತೆ ಸ್ಥಳೀಯರು ಯಗಟಿ ಪೊಲೀಸ್ ಠಾಣೆ ಎದುರು ಸೇರಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.





