06 August 2026 |

ಡ್ರಗ್ಸ್ ವಿರುದ್ಧ ಪೊಲೀಸರ ವಿಶೇಷ ಕಾರ್ಯಾಚರಣೆ: 159 ವಿದ್ಯಾರ್ಥಿಗಳ ದಿಢೀರ್ ಪರೀಕ್ಷೆ

  • 29 Jul 2026 10:00:58 AM

ಮಂಗಳೂರು: ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟುವ ಉದ್ದೇಶದಿಂದ ನಗರ ಪೊಲೀಸ್ ಇಲಾಖೆ ವಿವಿಧ ಕಾಲೇಜು ವಿದ್ಯಾರ್ಥಿಗಳ ಮೇಲೆ ವಿಶೇಷ ಡ್ರಗ್ಸ್ ಪರೀಕ್ಷಾ ಕಾರ್ಯಾಚರಣೆ ನಡೆಸಿದೆ. ಕೊಟೆಕಾರ ಬೀರಿ ಹಾಗೂ ಕೋಣಾಜೆಯ ಬಂಟ್ಸ್ ಭವನದ ಬಳಿ ಈ ತಪಾಸಣೆ ನಡೆಯಿತು.

 

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅವರ ಮಾರ್ಗದರ್ಶನದಲ್ಲಿ, ದಕ್ಷಿಣ ಹಾಗೂ ಕೇಂದ್ರ ವಿಭಾಗದ ಎಸಿಪಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ಖಾಸಗಿ ವಾಹನಗಳು ಮತ್ತು ಕಾಲೇಜು ಬಸ್‌ಗಳಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿಗಳನ್ನು ತಡೆದು ಮಲ್ಟಿ ಡ್ರಗ್ ಟೆಸ್ಟಿಂಗ್ ಕಿಟ್‌ಗಳ ಮೂಲಕ ಪರೀಕ್ಷಿಸಲಾಯಿತು.

 

ಒಟ್ಟು 159 ವಿದ್ಯಾರ್ಥಿಗಳ ಮಾದಕ ವಸ್ತು ಪರೀಕ್ಷೆ ನಡೆಸಲಾಗಿದ್ದು, ಅವರಲ್ಲಿ 158 ವಿದ್ಯಾರ್ಥಿಗಳ ವರದಿ ನೆಗೆಟಿವ್ ಬಂದಿದೆ. ಒಬ್ಬ ವಿದ್ಯಾರ್ಥಿಯ ಪರೀಕ್ಷಾ ವರದಿ ಮಾತ್ರ ಪಾಸಿಟಿವ್ ಆಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

 

ಸಂಜೆ 4.30ರಿಂದ 6 ಗಂಟೆಯವರೆಗೆ ನಡೆದ ಈ ವಿಶೇಷ ತಪಾಸಣೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಅತ್ಯಂತ ಕಡಿಮೆಯಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಬಳಕೆಯ ಪ್ರಮಾಣ ಇಳಿಮುಖವಾಗುತ್ತಿರುವ ಲಕ್ಷಣಗಳು ಕಂಡುಬಂದಿದ್ದರೂ, ಜಾಗೃತಿ ಕಾರ್ಯಕ್ರಮಗಳು ಮತ್ತು ನಿರಂತರ ತಪಾಸಣೆ ಮುಂದುವರಿಯುವುದು ಅಗತ್ಯ ಎಂದು ತಿಳಿಸಿದ್ದಾರೆ.

 

ಡ್ರಗ್ಸ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ವಿದ್ಯಾರ್ಥಿಯ ವಿರುದ್ಧ ಕಾನೂನುಬದ್ಧ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಕೌನ್ಸೆಲಿಂಗ್‌ಗೆ ಕಳುಹಿಸಲಾಗುವುದು. ಜೊತೆಗೆ, ಮುಂದಿನ ದಿನಗಳಲ್ಲಿಯೂ ಆ ವಿದ್ಯಾರ್ಥಿಯ ಮೇಲೆ ಅಗತ್ಯ ಮೇಲ್ವಿಚಾರಣೆ ಹಾಗೂ ಅನುಸರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.