ಬಂಟ್ವಾಳ: ಮಳೆಗಾಲ ಆರಂಭವಾದಾಗಲೆಲ್ಲ ಅಡಿಕೆ ಬೆಳೆಗಾರರನ್ನು ಹೆಚ್ಚಾಗಿ ಕಾಡುವ ಸಮಸ್ಯೆ ಎಂದರೆ ಕೊಳೆರೋಗ. ಈ ರೋಗದ ಪರಿಣಾಮವಾಗಿ ಅಪಾರ ಪ್ರಮಾಣದ ಫಸಲು ನೆಲಕ್ಕುರುಳಿ ರೈತರಿಗೆ ಆರ್ಥಿಕ ನಷ್ಟ ಉಂಟಾಗುವುದು ಸಾಮಾನ್ಯ. ಆದರೆ ಈ ವರ್ಷ ಹೆಚ್ಚಿನ ಪ್ರದೇಶಗಳಲ್ಲಿ ಕೊಳೆರೋಗದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುವುದು ಅಡಿಕೆ ಬೆಳೆಗಾರರಲ್ಲಿ ನಿರಾಳತೆಯ ವಾತಾವರಣ ಮೂಡಿಸಿದೆ. ಮಳೆಯ ಪ್ರಮಾಣ ನಿರೀಕ್ಷೆಗಿಂತ ಕಡಿಮೆಯಾಗಿರುವುದು ಸದ್ಯ ಅಡಿಕೆ ಬೆಳೆಗೆ ಅನುಕೂಲಕರವಾಗಿದೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಕೊಳೆರೋಗದಿಂದ ಹೆಚ್ಚಿನ ನಷ್ಟ ಅನುಭವಿಸಿದ್ದ ಹಿನ್ನೆಲೆಯಲ್ಲಿ ಈ ಬಾರಿ ಮೇ ತಿಂಗಳ ಕೊನೆಯ ವಾರದಿಂದಲೇ ಅಥವಾ ಜೂನ್ ಮೊದಲ ವಾರದಲ್ಲೇ ಬಹುತೇಕ ರೈತರು ಮುನ್ನೆಚ್ಚರಿಕಾ ಕ್ರಮವಾಗಿ ಬೋರ್ಡೋ ದ್ರಾವಣ ಸೇರಿದಂತೆ ಅಗತ್ಯ ಔಷಧಿಗಳನ್ನು ಸಿಂಪಡಣೆ ಮಾಡಿದ್ದರು. ಜೂನ್ ಮೊದಲ ವಾರದಲ್ಲಿ ಮಳೆ ಕಡಿಮೆಯಾಗಿದ್ದರಿಂದ ಮೊದಲ ಹಂತದ ಸಿಂಪಡಣೆ ಸುಗಮವಾಗಿ ನಡೆದಿದ್ದು, ಬಳಿಕ ಜುಲೈ ಮೊದಲ ವಾರದಲ್ಲಿಯೂ ಮಳೆ ಅಡ್ಡಿಯಾಗದ ಕಾರಣ ಎರಡನೇ ಹಂತದ ಔಷಧಿ ಸಿಂಪಡಣೆಯೂ ಸಮಯಕ್ಕೆ ಪೂರ್ಣಗೊಂಡಿದೆ.
ಸಾಮಾನ್ಯವಾಗಿ ಎರಡನೇ ಹಂತದ ಸಿಂಪಡಣೆ ವೇಳೆ ನಿರಂತರ ಮಳೆಯಾಗುವುದರಿಂದ ರೈತರಿಗೆ ತೊಂದರೆ ಉಂಟಾಗುತ್ತಿತ್ತು. ಪರಿಣಾಮವಾಗಿ ತಡವಾಗಿ ಸಿಂಪಡಣೆ ನಡೆಸಿದ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಳ್ಳುತ್ತಿತ್ತು. ಆದರೆ ಈ ಬಾರಿ ಅಂತಹ ಪರಿಸ್ಥಿತಿ ಎದುರಾಗಿಲ್ಲ ಎಂದು ಅಡಿಕೆ ಬೆಳೆಗಾರರು ತಿಳಿಸಿದ್ದಾರೆ.
ಬಿಟ್ಟುಬಿಟ್ಟು ಮಳೆಯಾದರೂ ಎಚ್ಚರ ಅಗತ್ಯ
ಅಡಿಕೆ ಬೆಳೆಗೆ ಅತಿಯಾದ ಮಳೆಯೂ ಹಾನಿಕಾರಕ. ಅದೇ ರೀತಿ ಬಿಟ್ಟುಬಿಟ್ಟು ಸುರಿಯುವ ಮಳೆಯೂ ಕೊಳೆರೋಗ ಹರಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಬಿಸಿಲು ಮತ್ತು ಮಳೆ ಪರ್ಯಾಯವಾಗಿ ಮುಂದುವರಿದರೂ ರೋಗದ ಅಪಾಯ ಇರುತ್ತದೆ. ಆದ್ದರಿಂದ ಸೂಕ್ತ ಸಮಯದಲ್ಲಿ ಬೋರ್ಡೋ ದ್ರಾವಣವನ್ನು ಸಿಂಪಡಿಸಿದರೆ ಕೊಳೆರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ರೈತರು ಸಲಹೆ ನೀಡಿದ್ದಾರೆ.
ಕಳೆದ ವರ್ಷದ ಕೊಳೆರೋಗದ ಹಾನಿ
2025ರ ಮಳೆಗಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅಡಿಕೆ ತೋಟಗಳು ಕೊಳೆರೋಗಕ್ಕೆ ತುತ್ತಾಗಿದ್ದವು. ಬಂಟ್ವಾಳದಲ್ಲಿ 1,715 ಹೆಕ್ಟೇರ್, ಬೆಳ್ತಂಗಡಿಯಲ್ಲಿ 1,980 ಹೆಕ್ಟೇರ್, ಕಡಬದಲ್ಲಿ 2,150 ಹೆಕ್ಟೇರ್, ಮಂಗಳೂರಿನಲ್ಲಿ 453.98 ಹೆಕ್ಟೇರ್, ಮೂಡಬಿದ್ರೆಯಲ್ಲಿ 1,463.61 ಹೆಕ್ಟೇರ್, ಮೂಲ್ಕಿಯಲ್ಲಿ 30 ಹೆಕ್ಟೇರ್, ಪುತ್ತೂರಿನಲ್ಲಿ 2,100 ಹೆಕ್ಟೇರ್, ಸುಳ್ಯದಲ್ಲಿ 1,100 ಹೆಕ್ಟೇರ್ ಹಾಗೂ ಉಳ್ಳಾಲದಲ್ಲಿ 146.64 ಹೆಕ್ಟೇರ್ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 11,139.23 ಹೆಕ್ಟೇರ್ ಅಡಿಕೆ ತೋಟಗಳು ಕೊಳೆರೋಗದ ಬಾಧೆಗೆ ಒಳಗಾಗಿದ್ದವು.
ರೈತರಿಗೆ ಪರಿಹಾರ ಮತ್ತು ಸಹಾಯಧನ
ಕೊಳೆರೋಗ ನಿಯಂತ್ರಣಕ್ಕಾಗಿ ರಾಷ್ಟ್ರೀಯ ತೋಟಗಾರಿಕಾ ಯೋಜನೆಯಡಿ ಬೋರ್ಡೋ ದ್ರಾವಣ ಸಿಂಪಡಣೆಗಾಗಿ ಎಕರೆಗೆ ₹600 ಸಹಾಯಧನ ನೀಡಲಾಗಿದ್ದು, ಒಟ್ಟಾರೆ ₹11.68 ಲಕ್ಷ ವಿತರಿಸಲಾಗಿತ್ತು. ಇದೇ ವೇಳೆ ಕಾಳುಮೆಣಸು ಹಾಗೂ ಅಡಿಕೆ ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ 2024–25ನೇ ಸಾಲಿನಲ್ಲಿ ಒಟ್ಟು ₹276 ಕೋಟಿ ಪರಿಹಾರವನ್ನು ರೈತರಿಗೆ ವಿತರಿಸಲಾಗಿತ್ತು.





