ಬಂಟ್ವಾಳ: ವೃದ್ಧೆಯೊಬ್ಬರನ್ನು ಹತ್ಯೆಗೈದು ಚಿನ್ನಾಭರಣ ದೋಚಿದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ದೋಷಿಗಳಾದ ಏಲ್ಮಾ ಪ್ರೆಶ್ಚಿತ್ ಬರೆಟ್ರೋ (23), ಸತೀಶ ನಾಯಕ್ (28) ಹಾಗೂ ಚರಣ್ ಕುಮಾರ್ (31)ವಿರುದ್ಧದ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಈ ಶಿಕ್ಷೆ ಪ್ರಕಟಿಸಲಾಗಿದೆ.
ಪ್ರಕರಣದ ವಿವರದಂತೆ, ಬಂಟ್ವಾಳದ ಅಮ್ಮುಂಜೆ ನಿವಾಸಿ ಬೆನಡಿಕ್ಟ್ ಕಾರ್ಲೋ (73) ಅವರ ಆರೈಕೆ ಮಾಡುತ್ತಿದ್ದ ಏಲ್ಮಾ ಪ್ರೆಶ್ಚಿತ್ ಬರೆಟ್ರೋ, ಚಿನ್ನಾಭರಣ ದೋಚುವ ಉದ್ದೇಶದಿಂದ ತನ್ನ ಸ್ನೇಹಿತ ಸತೀಶ ನಾಯಕ್ ಜೊತೆ ಸೇರಿ ಮೊದಲು ಆಹಾರದಲ್ಲಿ ವಿಷ ಬೆರೆಸಿ ಹತ್ಯೆ ಮಾಡಲು ಯತ್ನಿಸಿದ್ದಳು. ಆ ಯತ್ನ ವಿಫಲವಾದ ಬಳಿಕ ಚರಣ್ ಕುಮಾರ್‌ನ ಸಹಕಾರದೊಂದಿಗೆ 2021ರ ಜನವರಿ 25ರಂದು ರಾತ್ರಿ ಬೆನಡಿಕ್ಟ್ ಕಾರ್ಲೋ ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರೆಂದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಹತ್ಯೆಯ ಬಳಿಕ ಮೃತೆಯ ಬಳಿಯಿದ್ದ 61.070 ಗ್ರಾಂ ಚಿನ್ನಾಭರಣಗಳನ್ನು, ಅಂದಿನ ಅಂದಾಜು ₹3 ಲಕ್ಷ ಮೌಲ್ಯದ ಆಭರಣಗಳನ್ನು ದೋಚಿ, ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಲು ಆರೋಪಿಗಳು ಪ್ರಯತ್ನಿಸಿದ್ದರೆಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ, ದರೋಡೆ, ಸಂಚು ಹಾಗೂ ಸಾಕ್ಷ್ಯ ನಾಶ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ಆಗಿನ ಉಪನಿರೀಕ್ಷಕ ಪ್ರಸನ್ನ ಎಂ.ಎಸ್.ಅವರ ನೇತೃತ್ವದಲ್ಲಿ ಆರಂಭಿಸಲಾಗಿದ್ದು, ಆಗಿನ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು 2026ರ ಜುಲೈ 28ರಂದು ಮೂವರು ಆರೋಪಿಗಳನ್ನೂ ದೋಷಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದರು.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ವಾದ ಮಂಡಿಸಿದರು.





