30 July 2026 |

18–25 ವರ್ಷದ ವಿದ್ಯಾರ್ಥಿಗಳಲ್ಲಿ HIV ಬಗ್ಗೆ ಹೊರಬಿದ್ದ ಆತಂಕಕಾರಿ ಮಾಹಿತಿ; VTU ಎಚ್ಚರಿಕೆಯ ಹೆಜ್ಜೆ

  • 29 Jul 2026 02:55:50 PM

ಬೆಂಗಳೂರು: ಕರ್ನಾಟಕದಲ್ಲಿ 18ರಿಂದ 25 ವರ್ಷದ 7,000ಕ್ಕೂ ಹೆಚ್ಚು ಯುವಕರಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ HIV ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಜಾಗೃತಿ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಲಾಗಿದೆ.

 

ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ವರದಿ ಆಧರಿಸಿ, ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವ ಸೊಸೈಟಿ (KSAPS) ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಸೇರಿದಂತೆ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳಿಗಾಗಿ HIV ಜಾಗೃತಿ, ಸಮಾಲೋಚನೆ ಹಾಗೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲು ಸೂಚಿಸಿದೆ.

 

ಈ ಶಿಬಿರಗಳ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ HIV ಕುರಿತು ಅರಿವು ಮೂಡಿಸುವುದು, ಅಪಾಯದಲ್ಲಿರುವವರಿಗೆ ಸೂಕ್ತ ಸಮಾಲೋಚನೆ ನೀಡುವುದು ಹಾಗೂ ಅಗತ್ಯವಿದ್ದರೆ ಸ್ವಯಂಸಮ್ಮತಿಯೊಂದಿಗೆ ಪರೀಕ್ಷೆ ನಡೆಸಿ ಚಿಕಿತ್ಸೆ ಪಡೆಯಲು ಮಾರ್ಗದರ್ಶನ ಮಾಡುವುದು. ಅಧಿಕಾರಿಗಳ ಪ್ರಕಾರ, ವಿದ್ಯಾರ್ಥಿಗಳ ಗೌಪ್ಯತೆಯನ್ನು ಸಂಪೂರ್ಣವಾಗಿ ಕಾಪಾಡಲಾಗುತ್ತದೆ.

 

ಅಧಿಕೃತ ಅಂಕಿಅಂಶಗಳ ಪ್ರಕಾರ, ಕರ್ನಾಟಕದಲ್ಲಿ HIV ಸೋಂಕಿನ ಪ್ರಕರಣಗಳು ಯುವ ವಯೋಮಾನದವರಲ್ಲಿ ಹೆಚ್ಚುತ್ತಿರುವುದು ಆರೋಗ್ಯ ಇಲಾಖೆಯ ಕಳವಳಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲಾಗುತ್ತಿದೆ.