ಗೃಹಜ್ಯೋತಿ ಯೋಜನೆಯ ಮರು ನೋಂದಣಿ ಪ್ರಕ್ರಿಯೆ ವೇಳೆ ತಾಂತ್ರಿಕ ದೋಷಗಳು ಮುಂದುವರಿದಿದ್ದು, ಇದೀಗ ಹೊಸ ಸಮಸ್ಯೆ ಗ್ರಾಹಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮೀಟರ್ ಸಂಖ್ಯೆಯನ್ನು ದಾಖಲಿಸಿದ ಕೂಡಲೇ ‘Your Application Already Submitted’ ಎಂಬ ಸಂದೇಶ ಕಾಣಿಸಿಕೊಳ್ಳುತ್ತಿರುವ ಕಾರಣ, ಹಲವು ಮಂದಿ ಮರು ನೋಂದಣಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ.
ಈ ಮೊದಲು ಒಟಿಪಿ ಸಂಬಂಧಿತ ಸಮಸ್ಯೆಗಳು ವರದಿಯಾಗಿದ್ದರೆ, ಈಗ ಅರ್ಜಿ ಭರ್ತಿ ಮಾಡುವ ಮುನ್ನವೇ ಅರ್ಜಿ ಈಗಾಗಲೇ ಸಲ್ಲಿಕೆಯಾಗಿದೆ ಎಂಬ ಸೂಚನೆ ಬರುತ್ತಿದೆ. ಇದರಿಂದ ಉಡುಪಿ ಜಿಲ್ಲೆಯ ಅನೇಕ ಗ್ರಾಹಕರು ಗೊಂದಲಕ್ಕೀಡಾಗಿದ್ದು, ಯೋಜನೆಯ ಸೌಲಭ್ಯ ಮುಂದುವರಿಯುತ್ತದೆಯೇ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಮರು ನೋಂದಣಿ ಪೂರ್ಣಗೊಳ್ಳದಿದ್ದರೂ ಅರ್ಜಿ ಸಲ್ಲಿಕೆಯಾಗಿದೆ ಎಂದು ತೋರಿಸುತ್ತಿರುವ ಹಿನ್ನೆಲೆಯಲ್ಲಿ ಹಲವರು ಮೆಸ್ಕಾಂ ಕಚೇರಿಗಳು ಹಾಗೂ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲು ಮುಂದಾಗಿದ್ದಾರೆ. ಆದರೆ ಸಮಸ್ಯೆಯ ಮೂಲ ಕಾರಣದ ಬಗ್ಗೆ ಸಿಬ್ಬಂದಿ ಮತ್ತು ಅಧಿಕಾರಿಗಳಲ್ಲಿಯೂ ಸ್ಪಷ್ಟ ಮಾಹಿತಿ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ಸಮರ್ಪಕ ಉತ್ತರ ಸಿಗುತ್ತಿಲ್ಲ.
ಮನೆಗೆ ಬರುವ ಸಿಬ್ಬಂದಿ ಸ್ಥಳೀಯ ಕಚೇರಿಯನ್ನು ಸಂಪರ್ಕಿಸಲು ಸೂಚಿಸುತ್ತಿದ್ದರೆ, ಅಲ್ಲಿನ ಅಧಿಕಾರಿಗಳು ಉಪ ವಿಭಾಗ ಅಥವಾ ವಿಭಾಗ ಕಚೇರಿಗೆ ತೆರಳುವಂತೆ ಹೇಳುತ್ತಿದ್ದಾರೆ. ಇದರಿಂದ ಗ್ರಾಹಕರು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೆಸ್ಕಾಂ ಅಧಿಕಾರಿಗಳ ಪ್ರಾಥಮಿಕ ಮಾಹಿತಿಯಂತೆ, ಹಿಂದೆ ಇದೇ ಮೀಟರ್ ಅಥವಾ ಬೇರೆ ಮೊಬೈಲ್ ಸಂಖ್ಯೆಯ ಮೂಲಕ ನೋಂದಣಿ ನಡೆದಿದ್ದರೆ ವ್ಯವಸ್ಥೆಯಲ್ಲಿ ಅರ್ಜಿ ಈಗಾಗಲೇ ದಾಖಲಾಗಿರುವಂತೆ ತೋರಿಸಬಹುದು. ಸೇವಾ ಸಿಂಧು ಪೋರ್ಟಲ್‌ನಲ್ಲಿ ಸಂಗ್ರಹವಾಗಿರುವ ಮಾಹಿತಿಯ ಕಾರಣದಿಂದಲೂ ಈ ತಾಂತ್ರಿಕ ತೊಂದರೆ ಎದುರಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಈ ರೀತಿಯ ಸಮಸ್ಯೆಗಳು ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ವರದಿಯಾಗಿದ್ದು, ದೋಷವನ್ನು ಶೀಘ್ರ ಸರಿಪಡಿಸಲು ತಾಂತ್ರಿಕ ತಂಡಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಗ್ರಾಹಕರ ಗೊಂದಲ ನಿವಾರಣೆಗೆ ಮೆಸ್ಕಾಂ ತಕ್ಷಣ ಸ್ಪಷ್ಟನೆ ನೀಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.





