ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯ ಮಾತು ನಂಬಿದ 52 ವರ್ಷದ ಮಹಿಳೆಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ₹1.7 ಕೋಟಿ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಯುಕೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯನೆಂದು ಪರಿಚಯಿಸಿಕೊಂಡ ವ್ಯಕ್ತಿ ಫೇಸ್‌ಬುಕ್ ಮೂಲಕ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ್ದ. ಬಳಿಕ ವಾಟ್ಸಾಪ್‌ನಲ್ಲಿ ಹಲವು ದಿನಗಳ ಕಾಲ ಮಾತುಕತೆ ನಡೆಸಿ, ಚಿನ್ನ, ವಜ್ರಾಭರಣ ಸೇರಿದಂತೆ ದುಬಾರಿ ಉಡುಗೊರೆಗಳಿರುವ ಪಾರ್ಸೆಲ್ ಕಳುಹಿಸಿದ್ದೇನೆ ಎಂದು ನಂಬಿಸಿದ್ದ.
ನಂತರ ಕಸ್ಟಮ್ಸ್ ಅಧಿಕಾರಿಗಳಂತೆ ಕರೆ ಮಾಡಿದ ವಂಚಕರು, ಪಾರ್ಸೆಲ್ ಬಿಡುಗಡೆಗೆ ತೆರಿಗೆ ಹಾಗೂ ಕ್ಲಿಯರೆನ್ಸ್ ಶುಲ್ಕ ಪಾವತಿಸಬೇಕೆಂದು ಹೇಳಿ ಮಹಿಳೆಯಿಂದ ಹಲವು ಬಾರಿ ಹಣ ವರ್ಗಾಯಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ನಗದು ನೀಡುವಂತೆ ಸೂಚಿಸಿ, ಹಣ ಪಡೆಯಲು ಬರುವ ವ್ಯಕ್ತಿಯನ್ನು ಗುರುತಿಸಲು ₹10 ನೋಟಿನ ಸೀರಿಯಲ್ ಸಂಖ್ಯೆಯನ್ನೂ ವಾಟ್ಸಾಪ್‌ನಲ್ಲಿ ಕಳುಹಿಸಿದ್ದರು. ವಂಚನೆ ಅರಿಯುವಷ್ಟರಲ್ಲಿ ಮಹಿಳೆ ₹1.7 ಕೋಟಿ ಕಳೆದುಕೊಂಡಿದ್ದರು.
ಹಣವನ್ನು ಹವಾಲಾ ಜಾಲದ ಮೂಲಕ ಸಾಗಿಸಿರುವ ಶಂಕೆ ವ್ಯಕ್ತವಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318 ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





