ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸುಮಾರು 84.31 ಲಕ್ಷ ಮತದಾರರನ್ನು ಮೊದಲ ಕರಡು ಮತದಾರರ ಪಟ್ಟಿಯಿಂದ ಹೊರಗಿಡಲು ಗುರುತಿಸಲಾಗಿದೆಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ.
ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಶಾಶ್ವತವಾಗಿ ಸ್ಥಳಾಂತರಗೊಂಡವರು, ಮೃತಪಟ್ಟವರು, ಪತ್ತೆಯಾಗದವರು, ನಕಲಿ ಅಥವಾ ಎರಡು ಕಡೆ ಮತದಾರರಾಗಿ ಹೆಸರು ಹೊಂದಿರುವವರು ಸೇರಿದಂತೆ ವಿವಿಧ ಕಾರಣಗಳಿಂದ ಈ ಹೆಸರುಗಳನ್ನು ಮೊದಲ ಕರಡು ಪಟ್ಟಿಯಿಂದ ಹೊರಗಿಡಲಾಗಿದೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, 51.74 ಲಕ್ಷ ಜನರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, 14.99 ಲಕ್ಷ ಮಂದಿ ಮೃತಪಟ್ಟಿರುವುದು, 11.61 ಲಕ್ಷ ಮಂದಿ ಪತ್ತೆಯಾಗದಿರುವುದು ಹಾಗೂ 5.62 ಲಕ್ಷ ಡುಪ್ಲಿಕೇಟ್ ಮತದಾರರನ್ನು ಗುರುತಿಸಲಾಗಿದೆ.
ಪಟ್ಟಿಯಿಂದ ಹೆಸರು ಹೊರಗಿದ್ದರೂ ಆತಂಕಪಡುವ ಅಗತ್ಯವಿಲ್ಲ. ಅರ್ಹ ಮತದಾರರು ಆಗಸ್ಟ್ 8ರೊಳಗೆ ಬಿಎಲ್‌ಒ (BLO) ಸಹಾಯದೊಂದಿಗೆ ಫಾರ್ಮ್-6 ಸಲ್ಲಿಸಿ ಅಗತ್ಯ ದಾಖಲೆಗಳನ್ನು ನೀಡಿದರೆ ಅವರ ಅರ್ಜಿಯನ್ನು ಪರಿಗಣಿಸಲಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.





