06 August 2026 |

ಕಪಿಲಾ ನದಿಯಲ್ಲಿ ಸಿಲುಕಿದ್ದ ವೃದ್ಧರನ್ನು ಸುರಕ್ಷಿತವಾಗಿ ರಕ್ಷಿಸಿದ ಶೌರ್ಯ ತಂಡ

  • 30 Jul 2026 10:58:57 AM

ಬೆಳ್ತಂಗಡಿ: ಶಿಶಿಲ ಸಮೀಪದ ಬದಿಗುಡ್ಡೆ ಭಾಗದಲ್ಲಿ ಕಪಿಲಾ ನದಿಯ ಮಧ್ಯಭಾಗದಲ್ಲಿ ಸಿಲುಕಿದ್ದ 73 ವರ್ಷದ ಬಾಳಪ್ಪ ಅವರನ್ನು ಶ್ರೀಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸಾಹಸಮಯ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಈ ಘಟನೆ ಮಂಗಳವಾರ ನಡೆದಿದೆ.

 

ನದಿಯ ಮಧ್ಯದಲ್ಲಿ ವೃದ್ಧರೊಬ್ಬರು ಸಿಲುಕಿರುವುದನ್ನು ಗಮನಿಸಿದ ಸ್ಥಳೀಯ ಯುವಕರು, ಧಾರಾಕಾರ ಮಳೆಯಿಂದ ನೀರಿನ ಹರಿವು ತೀವ್ರಗೊಂಡಿರುವ ಕಾರಣ ತಕ್ಷಣವೇ ಶ್ರೀಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡಕ್ಕೆ ಮಾಹಿತಿ ನೀಡಿದ್ದಾರೆ.

 

ಮಾಹಿತಿ ಪಡೆದ ತಂಡದ ಸದಸ್ಯರಾದ ರಾಧಾಕೃಷ್ಣ ಗುತ್ತು, ರಮೇಶ್ ಬೈರಕಟ್ಟ ಹಾಗೂ ಪರಿಣತ ಈಜುಗಾರ ಮೋಹನ ಗೌಡ ಬದ್ರಿಜಾಲು ಕೂಡಲೇ ಸ್ಥಳಕ್ಕೆ ಧಾವಿಸಿದರು. ಶಿಶಿಲೇಶ್ವರ ದೇವಸ್ಥಾನದ ಕಿಂಡಿ ಅಣೆಕಟ್ಟಿನಿಂದ ಸುಮಾರು 900 ಮೀಟರ್ ಕೆಳಭಾಗದಲ್ಲಿ ಕಪಿಲಾ ನದಿಯ ಎರಡು ಕವಲುಗಳ ನಡುವೆ ಸಿಲುಕಿದ್ದ ವೃದ್ಧರಿಗೆ ಮೊದಲು ಜೀವರಕ್ಷಕ ಜಾಕೆಟ್ ತೊಡಿಸಿ, ಬಳಿಕ ಹಗ್ಗದ ನೆರವಿನಿಂದ ಸುರಕ್ಷಿತವಾಗಿ ನದಿಯ ದಡಕ್ಕೆ ಕರೆತಂದು ರಕ್ಷಿಸಿದರು.

 

ಭಾರೀ ಮಳೆಯಿಂದ ಬೆಳ್ತಂಗಡಿ ತತ್ತರ

ಬುಧವಾರ ಬೆಳ್ತಂಗಡಿ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಉಜಿರೆ ಪಟ್ಟಣದಲ್ಲಿ ಚರಂಡಿ ನೀರು ರಸ್ತೆಗಳ ಮೇಲೆ ಹರಿದ ಪರಿಣಾಮ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚಾರದಲ್ಲಿ ತೊಂದರೆ ಅನುಭವಿಸಿದರು. ನಿರಂತರ ಮಳೆಯಿಂದ ನೇತ್ರಾವತಿ ನದಿಯ ನೀರಿನ ಮಟ್ಟವೂ ಏರಿಕೆಯಾಗಿದೆ.

 

ರಾಷ್ಟ್ರೀಯ ಹೆದ್ದಾರಿಯ ಕೆಲವೆಡೆ ಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಚರಂಡಿಗಳು ತುಂಬಿ ಹರಿಯುತ್ತಿದ್ದು, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಕಸ-ಕಡ್ಡಿಗಳು ನೀರಿನ ಹರಿವಿಗೆ ಅಡ್ಡಿಯಾಗುತ್ತಿವೆ.

 

ಚರಂಡಿಗಳನ್ನು ತಕ್ಷಣ ಸ್ವಚ್ಛಗೊಳಿಸಿ ಮಳೆನೀರು ಸುಗಮವಾಗಿ ಹರಿಯುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.