06 August 2026 |

ಎಡಪದವು ಸಮೀಪ ಹೊಸ ಹೆದ್ದಾರಿಯಲ್ಲಿ ಬಿರುಕು; ಮಳೆಯಿಂದ ಭಾಗಶಃ ಕುಸಿತ, ಸ್ಥಳೀಯರಲ್ಲಿ ಆತಂಕ

  • 30 Jul 2026 11:05:41 AM

ಮಂಗಳೂರು/ಬಜ್ಜೆ: ನಿರಂತರ ಸುರಿಯುತ್ತಿರುವ ಮಳೆಯಿಂದ ಮಂಗಳೂರು–ಮೂಡುಬಿದಿರೆ ಸಂಪರ್ಕಿಸುವ ಹೊಸ ರಾಷ್ಟ್ರೀಯ ಹೆದ್ದಾರಿಯ ಎಡಪದವು ಸಮೀಪದ ಭಾಗದಲ್ಲಿ ಭೂ ಕುಸಿತ ಉಂಟಾಗಿದ್ದು, ರಸ್ತೆ ಭಾಗಶಃ ಹಾನಿಗೊಳಗಾಗಿದೆ. ಇದರಿಂದ ವಾಹನ ಸಂಚಾರಕ್ಕೂ ಅಡಚಣೆ ಎದುರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

 

ಇದರ ಜೊತೆಗೆ, ಮಂಗಳೂರಿನಿಂದ ಎಡಪದವು ಪೇಟೆ ಮೂಲಕ ಮೂಡುಬಿದಿರೆ ಕಡೆಗೆ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆಯ ಮೇಲ್ಭಾಗದಲ್ಲಿರುವ ಗುಡ್ಡ ಕುಸಿಯುವ ಸಾಧ್ಯತೆಯೂ ವ್ಯಕ್ತವಾಗಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಟ್ಟರೆ ಈ ಮಾರ್ಗದಲ್ಲಿ ತಾತ್ಕಾಲಿಕವಾಗಿ ಸಂಚಾರ ಸ್ಥಗಿತಗೊಳಿಸುವ ಅನಿವಾರ್ಯತೆ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

 

ಕೆಲವು ತಿಂಗಳುಗಳ ಹಿಂದೆ ಎಡಪದವು ಮುಚ್ಚಾರು ಕ್ರಾಸ್ ಸಮೀಪದ ಗುಡ್ಡ ಕುಸಿದು ಆತಂಕ ಸೃಷ್ಟಿಸಿತ್ತು. ಇದೀಗ ಅದೇ ಪ್ರದೇಶದ ಶಿಬ್ರಿಕೆರೆ ಭಾಗದಲ್ಲಿ ಬೈಪಾಸ್‌ಗಾಗಿ ನಿರ್ಮಿಸಲಾಗಿರುವ ನಾಲ್ಕು ಪಥದ ಹೆದ್ದಾರಿಯ ಒಂದು ಭಾಗ ಕುಸಿತಕ್ಕೊಳಗಾಗಿದ್ದು, ಆ ಭಾಗದಲ್ಲಿ ವಾಹನ ಸಂಚಾರ ಸುರಕ್ಷಿತವಾಗಿಲ್ಲ.

 

ಸ್ಥಳೀಯರ ಮಾಹಿತಿಯಂತೆ, ಕುಲಶೇಖರ–ಸಾಣೂರು ರಾಷ್ಟ್ರೀಯ ಹೆದ್ದಾರಿ 169ರ ಈ ಭಾಗದಲ್ಲಿ ಕಳೆದ ಒಂದು ವರ್ಷದಿಂದ ಕಾಮಗಾರಿ ನಡೆಯುತ್ತಿತ್ತು. ಸಹಜವಾಗಿ ಮಳೆ ನೀರು ಹರಿಯುತ್ತಿದ್ದ ಹಾಗೂ ಅಡಿಕೆ–ತೆಂಗಿನ ತೋಟಗಳಿದ್ದ ಪ್ರದೇಶದಲ್ಲಿ ಗುಡ್ಡದಿಂದ ದೊಡ್ಡ ಪ್ರಮಾಣದ ಮಣ್ಣು ತುಂಬಿಸಿ ಸುಮಾರು 35 ಅಡಿ ಎತ್ತರದಲ್ಲಿ ರಸ್ತೆ ನಿರ್ಮಿಸಲಾಗಿದೆ. ಈ ಹಿಂದೆ ನೀರು ಹರಿಯುತ್ತಿದ್ದ ಮಾರ್ಗವನ್ನು ಮುಚ್ಚಿದ ಕಾರಣ ಮಳೆ ನೀರು ಸರಾಗವಾಗಿ ಹರಿಯದೆ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗಿದೆ.

 

ರಸ್ತೆಯ ಕೆಳಭಾಗದಲ್ಲಿ ನೀರು ಹರಿಯಲು ಚರಂಡಿ ನಿರ್ಮಿಸಲಾಗಿದ್ದರೂ ಅದು ಸಮರ್ಪಕವಾಗಿಲ್ಲ. ಮಳೆ ನೀರಿನೊಂದಿಗೆ ಮಣ್ಣು ಸೇರಿ ಚರಂಡಿ ಮುಚ್ಚಿಕೊಂಡಿರುವುದರಿಂದ ನೀರು ಒಂದೇ ಕಡೆ ನಿಂತು ಸಣ್ಣ ಕೆರೆಯಂತಾಗಿದೆ. ಇದರಿಂದ ರಸ್ತೆಯ ಅಡಿಪಾಯ ದುರ್ಬಲಗೊಂಡು ಬಿರುಕುಗಳು ಕಾಣಿಸಿಕೊಂಡಿವೆ.

 

ಹೆದ್ದಾರಿಯ ಎರಡೂ ಬದಿಗಳಲ್ಲಿ ಅಗತ್ಯ ರಿಟೇನಿಂಗ್ ವಾಲ್ ನಿರ್ಮಿಸದಿರುವುದೂ ಸಮಸ್ಯೆಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸುಮಾರು 100 ಮೀಟರ್ ವ್ಯಾಪ್ತಿಯಲ್ಲಿ ರಸ್ತೆ ಬಿರುಕು ಬಿಟ್ಟಿದ್ದು, ಮಳೆ ಮುಂದುವರಿದರೆ ಇನ್ನಷ್ಟು ಭಾಗ ಕುಸಿಯುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

 

ಪ್ರಸ್ತುತ ಜೆಸಿಬಿ ಯಂತ್ರದ ಸಹಾಯದಿಂದ ಮೇಲ್ಭಾಗದಲ್ಲಿರುವ ಮಣ್ಣು ಹಾಗೂ ಬಂಡೆಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಆದರೆ ಭಾರೀ ಮಳೆ ಮುಂದುವರಿದರೆ ನೀರಿನ ಒತ್ತಡ ಹೆಚ್ಚಾಗಿ ರಸ್ತೆ ಸಂಪೂರ್ಣ ಕೊಚ್ಚಿಹೋಗುವ ಹಾಗೂ ನೀರು ಎಡಪದವು ಗ್ರಾಮದ ತೋಟಗಳತ್ತ ಹರಿಯುವ ಅಪಾಯವಿದೆ ಎಂಬ ಆತಂಕ ವ್ಯಕ್ತವಾಗಿದೆ.

 

ಈ ಸಮಸ್ಯೆ ಬಗ್ಗೆ ಕಳೆದ ವರ್ಷದ ಮಾರ್ಚ್‌ನಲ್ಲೇ ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. 35 ಅಡಿ ಎತ್ತರದ ರಸ್ತೆ ನಿರ್ಮಾಣದಿಂದ ಮಳೆ ನೀರು ನಿಲ್ಲುವ ಸಾಧ್ಯತೆ ಇರುವುದಾಗಿ ಮುಂಚಿತವಾಗಿಯೇ ಎಚ್ಚರಿಕೆ ನೀಡಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ಸಮರ್ಪಕ ಚರಂಡಿ, ಸರ್ವಿಸ್ ರಸ್ತೆ ಹಾಗೂ ಅಂಡರ್‌ಪಾಸ್ ನಿರ್ಮಾಣಕ್ಕೆ ಮನವಿ ಮಾಡಿದ್ದರೂ ಅದನ್ನು ಪರಿಗಣಿಸಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.