31 July 2026 |

ಪೊಲೀಸರು ಮಹಜರು ನಡೆಸಿದ ವೇಳೆ ಬಹಿರಂಗವಾದ ಮಾಹಿತಿ: ಉಪ್ಪಿನಂಗಡಿಯಲ್ಲಿ ಕತ್ತಿ ಖರೀದಿಸಿದ್ದ ಲಾವಣ್ಯ ಹತ್ಯೆ ಆರೋಪಿ

  • 30 Jul 2026 12:59:09 PM

ಬಂಟ್ವಾಳ: ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಜುಲೈ 16ರಂದು ನಡೆದ ಲಾವಣ್ಯ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಕೊಲೆ ಕೃತ್ಯಕ್ಕೆ ಬಳಸಿದ್ದ ಕತ್ತಿಯನ್ನು ಆರೋಪಿ ಉಪ್ಪಿನಂಗಡಿಯ ಕೃಷಿ ಉಪಕರಣಗಳ ಅಂಗಡಿಯೊಂದರಿಂದ ಖರೀದಿಸಿದ್ದಾನೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಬುಧವಾರ ಪೊಲೀಸರು ಅಲ್ಲಿಗೆ ತೆರಳಿ ಮಹಜರು ಪ್ರಕ್ರಿಯೆ ನಡೆಸಿದರು.

 

ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಲಾವಣ್ಯ ಹತ್ಯೆಗೆ ಮುಂಚಿತವಾಗಿಯೇ ಸಂಚು ರೂಪಿಸಿದ್ದ ಎನ್ನಲಾಗುತ್ತಿದೆ. ಜುಲೈ 15ರಂದು ಉಪ್ಪಿನಂಗಡಿಗೆ ಬಂದಿದ್ದ ಆತ ಕೃಷಿ ಸಲಕರಣೆಗಳ ಅಂಗಡಿಗೆ ತೆರಳಿ ಉದ್ದನೆಯ ಕತ್ತಿಯನ್ನು ಪರಿಶೀಲಿಸಿ ಅದರ ಬೆಲೆ ವಿಚಾರಿಸಿದ್ದ. ಬಳಿಕ ಬೇರೆಡೆ ಮಾಹಿತಿ ಪಡೆಯಲು ತೆರಳಿದ ಆತ, ನಂತರ ಮತ್ತೆ ಅದೇ ಅಂಗಡಿಗೆ ಮರಳಿ ಕತ್ತಿಯನ್ನು ಖರೀದಿಸಿದ್ದ ಎಂದು ತಿಳಿದುಬಂದಿದೆ.

 

ಅಂಗಡಿಯವರು ಕತ್ತಿಯನ್ನು ಕಾಗದದಲ್ಲಿ ಸುತ್ತಿ ಪ್ಯಾಕ್ ಮಾಡಿ ಇಟ್ಟಿದ್ದು, ಆರೋಪಿ ಸ್ವಲ್ಪ ಸಮಯದ ಬಳಿಕ ಮರಳಿ ಬಂದು ಅದನ್ನು ತೆಗೆದುಕೊಂಡು ಹೋಗಿದ್ದಾನೆ. ಈ ಸಂಪೂರ್ಣ ಘಟನೆ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವುದು ತನಿಖೆಗೆ ಪ್ರಮುಖ ಸಾಕ್ಷಿಯಾಗಿದೆ.

 

ಈ ಸಂಬಂಧ ತನಿಖಾಧಿಕಾರಿಗಳು ಆರೋಪಿ ಚೇತನ್‌ನ ಮುಖವನ್ನು ಕಪ್ಪು ಬಟ್ಟೆಯಿಂದ ಮುಚ್ಚಿ ಸ್ಥಳಕ್ಕೆ ಕರೆತಂದು ಮಹಜರು ನಡೆಸಿದ್ದು, ಪ್ರಕರಣದ ತನಿಖೆಯನ್ನು ಮತ್ತಷ್ಟು ಮುಂದುವರಿಸಿದ್ದಾರೆ.