31 July 2026 |

ಬೆಳ್ತಂಗಡಿ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ₹3 ಕೋಟಿ ಅನುದಾನಕ್ಕೆ ಸರ್ಕಾರದ ಮೊರೆ ಹೋದ ಶಾಸಕ ಹರೀಶ್ ಪೂಂಜಾ

  • 30 Jul 2026 04:39:18 PM

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪ್ರಮುಖ ಧಾರ್ಮಿಕ ಮತ್ತು ಐತಿಹಾಸಿಕ ಕ್ಷೇತ್ರಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ₹3 ಕೋಟಿ ಅನುದಾನ ಮಂಜೂರು ಮಾಡುವಂತೆ ಶಾಸಕ ಹರೀಶ್ ಪೂಂಜಾ ಮನವಿ ಸಲ್ಲಿಸಿದ್ದಾರೆ.

 

ಬುಧವಾರ (ಜುಲೈ 30) ರಾಜ್ಯದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರನ್ನು ಭೇಟಿಯಾದ ಅವರು, ಕ್ಷೇತ್ರದ ನಾಲ್ಕು ಪ್ರಮುಖ ದೇವಾಲಯಗಳ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸುವಂತೆ ಕೋರಿದರು.

 

ಮನವಿಯ ಪ್ರಕಾರ, ನಾರಾವಿ ಶ್ರೀ ಬ್ರಹ್ಮಬೈದರ್ಕಳ ಗರಡಿಗೆ ₹1 ಕೋಟಿ, ಗರ್ಡಾಡಿ ನಂದಿಬೆಟ್ಟದ ಶ್ರೀ ನಂದಿಕೇಶ್ವರ ದೇವಸ್ಥಾನಕ್ಕೆ ₹1 ಕೋಟಿ, ಮಚ್ಚಿನ ಮಾಣೂರು ಸಹಪರಿವಾರ ಶ್ರೀ ಶಾಸ್ತರ ದೇವಸ್ಥಾನಕ್ಕೆ ₹50 ಲಕ್ಷ ಹಾಗೂ ಕೊಯ್ಯರು ದೆಂತ್ಯಾರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನಕ್ಕೆ ₹50 ಲಕ್ಷ ಅನುದಾನ ನೀಡುವಂತೆ ವಿನಂತಿಸಲಾಗಿದೆ.

 

ಈ ಅನುದಾನ ದೊರೆತಲ್ಲಿ ಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದ್ದು, ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನು ಇನ್ನಷ್ಟು ಉತ್ತಮವಾಗಿ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಶಾಸಕ ಹರೀಶ್ ಪೂಂಜಾ ತಿಳಿಸಿದ್ದಾರೆ.