06 August 2026 |

ಹಣದ ಬೇಡಿಕೆ ಆರೋಪ: ಕಾರ್ಕಳ ಡಿವೈಎಸ್‌ಪಿ ಸೇರಿದಂತೆ ಮೂವರು ಅಮಾನತು

  • 31 Jul 2026 09:58:57 AM

ಉಡುಪಿ: ಪೊಲೀಸ್ ಇಲಾಖೆಯಲ್ಲಿ ಹಣದ ಬೇಡಿಕೆ ನಡೆದಿದೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ, ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಕಾರ್ಕಳ ಉಪ ವಿಭಾಗದ ಡಿವೈಎಸ್‌ಪಿ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

 

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದು, ವೈರಲ್ ಆಗಿರುವ ವಿಡಿಯೊಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದ ಆರೋಪಗಳನ್ನು ಆಧರಿಸಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಿಂದ ಆರಂಭಿಕ ತನಿಖೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

 

ತನಿಖೆಯ ಪ್ರಾಥಮಿಕ ವರದಿಯಲ್ಲಿ ಲಭ್ಯವಾದ ಮಾಹಿತಿಯ ಆಧಾರದ ಮೇಲೆ ಕಾರ್ಕಳ ಉಪ ವಿಭಾಗದ ಡಿವೈಎಸ್‌ಪಿ ವಿಜಯ ಪ್ರಸಾದ್, ಕಾರ್ಕಳ ವೃತ್ತ ನಿರೀಕ್ಷಕ ಸಂದೀಪ್ ಹಾಗೂ ಡಿವೈಎಸ್‌ಪಿ ಕಚೇರಿಯ ಸಿಬ್ಬಂದಿ ಶಿವಾನಂದ ಅವರನ್ನು ಇಲಾಖಾ ಶಿಸ್ತು ಕ್ರಮ ಪೂರ್ಣಗೊಳ್ಳುವವರೆಗೆ ಅಮಾನತುಗೊಳಿಸುವ ಆದೇಶ ಹೊರಡಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ಮಟ್ಟದಲ್ಲಿ ಇನ್ನಷ್ಟು ತನಿಖೆ ಮುಂದುವರಿದಿದ್ದು, ಅಂತಿಮ ತನಿಖಾ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.