06 August 2026 |

ಮಂಗಳೂರು ವಿವಿಯಲ್ಲಿ ಉಪನ್ಯಾಸಕರ ಕೊರತೆ ನಿವಾರಣೆಗೆ ಸರ್ಕಾರಕ್ಕೆ ಮನವಿ

  • 31 Jul 2026 11:00:39 AM

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪೂರ್ಣಕಾಲಿಕ ಉಪನ್ಯಾಸಕರ ಕೊರತೆಯನ್ನು ತ್ವರಿತವಾಗಿ ಭರ್ತಿ ಮಾಡುವಂತೆ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅವರಿಗೆ ಪತ್ರ ಬರೆದು ಮನವಿ ಸಲ್ಲಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ. ಎಲ್. ಧರ್ಮ ತಿಳಿಸಿದ್ದಾರೆ.

 

ನಗರದ ವಿಶ್ವವಿದ್ಯಾಲಯ ಕಾಲೇಜು ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ವಿಭಾಗಗಳಲ್ಲಿ ಪ್ರಾಧ್ಯಾಪಕರ ಕೊರತೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಹೇಳಿದರು. 2018ರಿಂದ ನಿವೃತ್ತಿಯಾದ ಉಪನ್ಯಾಸಕರ ಹುದ್ದೆಗಳು ಇನ್ನೂ ಭರ್ತಿಯಾಗದೆ ಉಳಿದಿದ್ದು, ಶೀಘ್ರ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಸರ್ಕಾರವನ್ನು ಕೋರಲಾಗಿದೆ ಎಂದರು.

 

ಪ್ರಸ್ತುತ ಅತಿಥಿ ಉಪನ್ಯಾಸಕರ ಸೇವೆ ಪಡೆಯಲಾಗುತ್ತಿದೆಯಾದರೂ, ಅವರ ಮತ್ತು ವಿದ್ಯಾರ್ಥಿಗಳ ನಡುವಿನ ವಯಸ್ಸಿನ ಅಂತರ ಕಡಿಮೆ ಇರುವ ಕಾರಣ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಹಾಗೂ ವೈಯಕ್ತಿಕ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಈ ಅಂಶವನ್ನೂ ಸರ್ಕಾರಕ್ಕೆ ಕಳುಹಿಸಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದರು.

 

460 ಪಿಂಚಣಿದಾರರ ಸಮಸ್ಯೆಗೆ ಪರಿಹಾರ

ವಿಶ್ವವಿದ್ಯಾಲಯದ 460 ಪಿಂಚಣಿದಾರರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಾಗಿದ್ದು, ಇನ್ನು ಮುಂದೆ ಪ್ರತಿ ತಿಂಗಳ ಮೊದಲ ವಾರದಲ್ಲೇ ಪಿಂಚಣಿ ಹಣ ಜಮೆಯಾಗುವ ವ್ಯವಸ್ಥೆ ರೂಪಿಸಲಾಗಿದೆ ಎಂದು ಕುಲಪತಿ ಹೇಳಿದರು. ಪಿಂಚಣಿ ನಿಧಿ ಟ್ರಸ್ಟ್ ಮೂಲಕ ಅಗತ್ಯ ಹಣವನ್ನು ವ್ಯವಸ್ಥೆ ಮಾಡಿ ಪಾವತಿ ಮಾಡಲಾಗುತ್ತಿದೆ ಎಂದರು.

 

ಪದವಿ ಫಲಿತಾಂಶದಲ್ಲಿ ಶೇ. 98.47 ಸಾಧನೆ

ವಿಶ್ವವಿದ್ಯಾಲಯ ವ್ಯಾಪ್ತಿಯ 6ನೇ ಹಾಗೂ 8ನೇ ಸೆಮಿಸ್ಟರ್ ಪದವಿ ಪರೀಕ್ಷೆಗಳ ಮೌಲ್ಯಮಾಪನ ಜುಲೈ 18ರಂದು ಪೂರ್ಣಗೊಂಡಿದೆ. ಒಟ್ಟು 17,347 ವಿದ್ಯಾರ್ಥಿಗಳ ಪೈಕಿ 17,076 ವಿದ್ಯಾರ್ಥಿಗಳ ಫಲಿತಾಂಶವನ್ನು ಜುಲೈ 29ರಂದು ಪ್ರಕಟಿಸಲಾಗಿದ್ದು, ಶೇ. 98.47 ಫಲಿತಾಂಶ ದಾಖಲಾಗಿದೆ. ವಿದ್ಯಾರ್ಥಿಗಳು ಯುಯುಸಿಎಂಎಸ್ ಪೋರ್ಟಲ್‌ನಲ್ಲಿ ಲಾಗಿನ್ ಆಗಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು. ತಾಂತ್ರಿಕ ಕಾರಣಗಳಿಂದ ಕೆಲವರ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ ಎಂದು ತಿಳಿಸಿದರು.

 

ಈ ಬಾರಿ ಮೌಲ್ಯಮಾಪನ ಕೇಂದ್ರದಲ್ಲಿಯೇ ಅಂಕಗಳ ದಾಖಲಾತಿಯನ್ನು ಸಂಪೂರ್ಣ ಆನ್‌ಲೈನ್ ವ್ಯವಸ್ಥೆಯ ಮೂಲಕ ಗಣಕೀಕರಣಗೊಳಿಸಿದ್ದರಿಂದ ಮೌಲ್ಯಮಾಪನ ಪೂರ್ಣಗೊಳ್ಳುವ ಹಂತದಲ್ಲೇ ಫಲಿತಾಂಶ ಪ್ರಕಟಿಸಲು ಸಾಧ್ಯವಾಯಿತು ಎಂದು ಪ್ರೊ. ಧರ್ಮ ವಿವರಿಸಿದರು.

 

ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಸಂತೋಷ್, ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ ಹಾಗೂ ಹಣಕಾಸು ಅಧಿಕಾರಿ ಪಂಚಲಿಂಗಸ್ವಾಮಿ ಉಪಸ್ಥಿತರಿದ್ದರು.

 

ಬೆಳಪುವಿನಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪನೆಗೆ ಪ್ರಸ್ತಾವನೆ

ಉಡುಪಿಯ ಬೆಳಪುವಿನಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದ ವಿಜ್ಞಾನ ಸಂಶೋಧನಾ ಕೇಂದ್ರವನ್ನು ಅತ್ಯಾಧುನಿಕ ಕ್ರೀಡಾ ಅಕಾಡೆಮಿಯಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿರಿಸಲಾಗುತ್ತಿದೆ ಎಂದು ಕುಲಪತಿ ತಿಳಿಸಿದರು. ಕೇಂದ್ರ ಹಾಗೂ ರಾಜ್ಯದ ಯುವ ಸಬಲೀಕರಣ ಇಲಾಖೆಗಳ ಸಹಕಾರದೊಂದಿಗೆ ಸ್ಥಳೀಯ ಕ್ರೀಡಾ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರಿ ಪ್ರಾಯೋಜಿತ ಕ್ರೀಡಾ ಅಕಾಡೆಮಿ ಸ್ಥಾಪಿಸಲು ಸಲಹೆ ಸಲ್ಲಿಸಲಾಗುತ್ತಿದೆ ಎಂದರು.