ಪುತ್ತೂರು: ಪುತ್ತಿಲ ಪರಿವಾರದ ವತಿಯಿಂದ ಪುತ್ತೂರಿನಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಪುತ್ತಿಲ ಪರಿವಾರದ ಮುಖಂಡ ಪಾಣಾಜೆಯ ನಾರಾಯಣ ಪ್ರಕಾಶ್ ಅವರು ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯ ವೇಳೆ ಪ್ರಾಮಾಣಿಕ ನಾಯಕ ಅರುಣ್ ಕುಮಾರ್ ಪುತ್ತಿಲ ಅವರನ್ನು ಕಲ್ಲಡ್ಕ ಪ್ರಭಾಕರ್ ಭಟ್ ಅವರು "ಕಳ್ಳ, ಕಳ್ಳ" ಎಂದು ಕರೆದಿದ್ದರು ಎಂದು ನೆನಪಿಸಿದರು. ಇದೇ ವೇಳೆ, "ನಿಜವಾದ ಕಳ್ಳ ಯಾರು? ಶಾಲಾ ಬಸ್‌ಗೆ ವಿಮೆ ಮಾಡಿಸದವರು ಯಾರು? ವ್ಯಾನ್‌ಗೆ ವಿಮೆ ಮಾಡಿಸದೇ ಮಗುವಿನ ಸಾವಿಗೆ ಕಾರಣರಾದವರು ಯಾರು?" ಎಂದು ಪ್ರಶ್ನಿಸಿದರು.
ಮುಂದುವರಿದು ಮಾತನಾಡಿದ ನಾರಾಯಣ ಪ್ರಕಾಶ್, ಕಲ್ಲಡ್ಕ ಪ್ರಭಾಕರ್ ಭಟ್ ಅವರು ಪಕ್ಷ ಮತ್ತು ಸಂಘಟನೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿರುವುದನ್ನು ಒಪ್ಪಿಕೊಂಡರೂ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸರ್ವಾಧಿಕಾರಿ ಧೋರಣೆಯಲ್ಲಿ ನಡೆಯುತ್ತಿರುವುದಾಗಿ ಆರೋಪಿಸಿದರು.
ಮನೆಯಲ್ಲೇ ಕುಳಿತು ಕೆಲವರ ಇಚ್ಛೆಯಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪದ್ಧತಿಗೆ ತಕ್ಷಣ ತೆರೆ ಬೀಳಬೇಕು ಎಂದು ಅವರು ಒತ್ತಾಯಿಸಿದರು. ಹಲವು ವರ್ಷಗಳಿಂದ ಸಂಘಟನೆಗೆ ಸೇವೆ ಸಲ್ಲಿಸಿರುವುದು ಸಾಕು, ಇನ್ನು ಮುಂದೆ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಬೇಕಾದ ಸಮಯ ಬಂದಿದೆ ಎಂದು ನಾರಾಯಣ ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದರು.





