ವಿಟ್ಲ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ವೃದ್ಧರು ತೋಟದ ಚರಂಡಿಯೊಂದರಲ್ಲಿ ಜೀವಂತವಾಗಿ ಪತ್ತೆಯಾಗಿದ್ದು, ಸ್ಥಳೀಯರ ಸಮಯೋಚಿತ ನೆರವಿನಿಂದ ಅವರ ಜೀವ ಉಳಿದಿದೆ.
ವೃದ್ಧರು ಕಳೆದ ಮಂಗಳವಾರದಿಂದ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಾಹಿತಿ ಪಡೆದ ಅಗ್ನಿಶಾಮಕ ದಳ ಸಿಬ್ಬಂದಿ ಕೆರೆ, ಹಳ್ಳ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿದರೂ ಆರಂಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಇದರ ನಡುವೆ ಶುಕ್ರವಾರ ಬೆಳಿಗ್ಗೆ ಸಂಬಂಧಿಕರು, ಕೋಡಪದವು ಮಾರುತಿ ಫ್ರೆಂಡ್ಸ್ ತಂಡ ಹಾಗೂ ಸಾರ್ವಜನಿಕರು ಸೇರಿ ಮತ್ತೊಮ್ಮೆ ವ್ಯಾಪಕ ಶೋಧ ಕಾರ್ಯ ಆರಂಭಿಸಿದರು. ಮನೋಹರ, ಜಿಲ್ಲಾ ಬಿಜೆಪಿ ವಕ್ತಾರ ಮಾಧವ ಮಾವೆ, ಮಾಣಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರವಿಂದ ರೈ, ರೈತ ಮೋರ್ಚಾ ಅಧ್ಯಕ್ಷ ಉಮೇಶ್ ಶೆಟ್ಟಿ, ಸೀತಾರಾಮ ಗೌಡ, ಮುರಳಿ ಭಟ್ ಹಾಗೂ ಮನೋಹರ ಕುಕ್ಕಿಲ ಅವರ ನೇತೃತ್ವದಲ್ಲಿ ವಿವಿಧ ಪ್ರದೇಶಗಳಲ್ಲಿ ಹುಡುಕಾಟ ನಡೆಸಲಾಯಿತು.
ಶೋಧ ಕಾರ್ಯದ ವೇಳೆ ತೋಟದ ಚರಂಡಿಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಬಿದ್ದಿದ್ದ ವೃದ್ಧರನ್ನು ಪತ್ತೆ ಹಚ್ಚಲಾಯಿತು. ಕೂಡಲೇ ಸ್ಥಳೀಯರು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ವಿಟ್ಲದ ಆಪದ್ಭಾಂಧವ ಮುರಳಿ ವಿಟ್ಲ ಅವರಿಗೆ ಮಾಹಿತಿ ನೀಡಿದರು. ಬಳಿಕ ಆಂಬುಲೆನ್ಸ್ ಮೂಲಕ ವಿಟ್ಲಕ್ಕೆ ಕರೆತಂದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಯಿತು.
ವೈದ್ಯರ ಚಿಕಿತ್ಸೆಗೆ ವೃದ್ಧರು ಉತ್ತಮವಾಗಿ ಸ್ಪಂದಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.





