01 August 2026 |

ಮೋದಿ ವಿರುದ್ಧದ ವೈರಲ್ ಪೋಸ್ಟ್‌ಗಳು: ಮೆಟಾ ಇಂಡಿಯಾ ಅಧಿಕಾರಿಗಳು ಹಾಗೂ ಸಾಮಾಜಿಕ ಜಾಲತಾಣ ಖಾತೆ ನಿರ್ವಾಹಕರ ವಿರುದ್ಧ ಎಫ್‌ಐಆರ್

  • 31 Jul 2026 03:51:58 PM

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ವಿಷಯಗಳನ್ನು ಪ್ರಸಾರ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಮೆಟಾ ಇಂಡಿಯಾದ ಕೆಲವು ಅಧಿಕಾರಿಗಳು ಹಾಗೂ ಹಲವು ಸಾಮಾಜಿಕ ಜಾಲತಾಣ ಖಾತೆ ನಿರ್ವಾಹಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

 

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಾಮಾಜಿಕ ಜಾಲತಾಣ ವಿಭಾಗ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ವಿಷಯಗಳು ವೈರಲ್ ಆಗಿರುವ ಬಗ್ಗೆ ತನಿಖೆ ಆರಂಭಿಸಲಾಗಿದೆ.

 

ಪ್ರಕರಣದಲ್ಲಿ ಮೆಟಾ ಇಂಡಿಯಾದ ಸಂಬಂಧಿತ ಅಧಿಕಾರಿಗಳು ಹಾಗೂ ಆಕ್ಷೇಪಾರ್ಹ ವಿಷಯಗಳನ್ನು ಹಂಚಿಕೊಂಡಿರುವುದಾಗಿ ಆರೋಪಿಸಲಾದ ಕೆಲವು ಸಾಮಾಜಿಕ ಜಾಲತಾಣ ಖಾತೆ ನಿರ್ವಾಹಕರ ಹೆಸರುಗಳನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

 

ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವೈರಲ್ ಆಗಿರುವ ಪೋಸ್ಟ್‌ಗಳ ಮೂಲ, ಅವುಗಳನ್ನು ಹಂಚಿಕೊಂಡ ಖಾತೆಗಳು ಹಾಗೂ ಸಂಬಂಧಿತ ಡಿಜಿಟಲ್ ಸಾಕ್ಷ್ಯಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.

 

ಇದುವರೆಗೆ ಮೆಟಾ ಇಂಡಿಯಾ ಅಥವಾ ಸಂಬಂಧಿತ ಅಧಿಕಾರಿಗಳಿಂದ ಈ ಪ್ರಕರಣ ಕುರಿತು ಅಧಿಕೃತ ಪ್ರತಿಕ್ರಿಯೆ ಪ್ರಕಟವಾಗಿಲ್ಲ.