02 August 2026 |

ಮುಂಡಾಜೆ-ಧರ್ಮಸ್ಥಳ ರಸ್ತೆ ಗುಡ್ಡ ಕುಸಿತದಿಂದ ಬಂದ್: ಬೆಳ್ತಂಗಡಿಯಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ

  • 01 Aug 2026 06:56:29 PM

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಾದ್ಯಂತ ಶನಿವಾರ ಸುರಿದ ಧಾರಾಕಾರ ಮಳೆಯಿಂದ ವ್ಯಾಪಕ ಹಾನಿ ಉಂಟಾಗಿದೆ. ಹಲವೆಡೆ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಕೃಷಿ ಜಮೀನುಗಳು ಹಾಗೂ ಅಡಿಕೆ ತೋಟಗಳು ನೀರಿನಿಂದ ಆವೃತವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

 

ಮುಂಡಾಜೆ-ಧರ್ಮಸ್ಥಳ ಸಂಪರ್ಕ ರಸ್ತೆಯಲ್ಲಿ ಗುಡ್ಡ ಕುಸಿದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಧರ್ಮಸ್ಥಳದ ಮಣ್ಣಸಂಕ ಪ್ರದೇಶದಲ್ಲಿ ನೀರು ನಿಂತಿರುವುದರಿಂದ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ.

 

ಸೋಮಂತಡ್ಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಭಾಗದಲ್ಲಿ ಮಳೆ ನೀರಿನ ಹರಿವಿಗೆ ಸಮರ್ಪಕ ವ್ಯವಸ್ಥೆ ಇಲ್ಲದಿರುವುದೇ ಸಮಸ್ಯೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೆದ್ದಾರಿಯ ಎರಡೂ ಬದಿಯ ನೀರನ್ನು ಒಂದೇ ಬಾಕ್ಸ್ ಚರಂಡಿಗೆ ಹರಿಸಿರುವುದರಿಂದ ನೀರು ಸರಾಗವಾಗಿ ಹೊರಹೋಗದೆ ಮನೆಗಳು ಹಾಗೂ ಕೃಷಿ ಭೂಮಿಗಳಿಗೆ ನುಗ್ಗಿದೆ ಎನ್ನಲಾಗಿದೆ.

 

ಈ ಹಿನ್ನೆಲೆ, ಹಿಂದೆ ಇದ್ದಂತೆ ಮಳೆ ನೀರು ಸುಗಮವಾಗಿ ಹರಿಯುವ ವ್ಯವಸ್ಥೆಯನ್ನು ಮರುಸ್ಥಾಪಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಒತ್ತಾಯಿಸಿದ್ದಾರೆ.