06 August 2026 |

ಮುಂದಿನ ದಿನಗಳಲ್ಲಿ ಭಾರೀ ಮಳೆಯ ಮುನ್ಸೂಚನೆ: ಅಧಿಕಾರಿಗಳು ಸಂಪೂರ್ಣ ಸನ್ನದ್ಧರಾಗಿರಲು ಡಿಸಿ ಸೂಚನೆ

  • 02 Aug 2026 10:57:03 AM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆ ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಇಲಾಖೆಗಳ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ. ಸೂಚನೆ ನೀಡಿದ್ದಾರೆ.

 

ಶನಿವಾರ ನಡೆದ ಆನ್‌ಲೈನ್ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಮಳೆಯಿಂದ ಉಂಟಾಗಬಹುದಾದ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ತಾಲೂಕು ಆಡಳಿತಗಳು ದಿನದ 24 ಗಂಟೆಗಳ ಕಾಲ ಸಾರ್ವಜನಿಕರ ಸೇವೆಗೆ ಸಜ್ಜಾಗಿರಬೇಕು ಎಂದು ತಿಳಿಸಿದರು. ಜೊತೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ನಿಯಂತ್ರಣ ಕೊಠಡಿಗಳು ನಿರಂತರವಾಗಿ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಿದರು.

 

ಜಿಲ್ಲೆಯ ಹಲವು ಭಾಗಗಳಲ್ಲಿ ಗುಡ್ಡ ಕುಸಿತ ಮತ್ತು ಮಣ್ಣು ಜರಿತದ ಘಟನೆಗಳು ವರದಿಯಾಗುತ್ತಿರುವುದರಿಂದ ಈಗಾಗಲೇ ಗುರುತಿಸಲಾದ ಅಪಾಯದ ಪ್ರದೇಶಗಳ ಮೇಲೆ ನಿರಂತರ ನಿಗಾ ಇರಿಸಬೇಕು ಎಂದು ಹೇಳಿದರು. ಅಗತ್ಯವಿದ್ದಲ್ಲಿ ಅಪಾಯದ ವಲಯದಲ್ಲಿರುವ ನಿವಾಸಿಗಳನ್ನು ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಮಣ್ಣು ಜರಿಯುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಮರಳು ಚೀಲಗಳನ್ನು ಅಳವಡಿಸಿ ತಾತ್ಕಾಲಿಕ ರಕ್ಷಣಾ ಕ್ರಮ ಕೈಗೊಳ್ಳಬೇಕು. ಖಾಸಗಿ ಜಮೀನುಗಳಲ್ಲಿಯೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿದರು.

 

ಪ್ರಾಕೃತಿಕ ವಿಕೋಪದಿಂದ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದ ಪರಿಹಾರಧನದ ಚೆಕ್ ಅನ್ನು 24 ಗಂಟೆಗಳೊಳಗೆ ವಿತರಿಸಬೇಕು. ಮಳೆಯಿಂದ ಸ್ಥಳಾಂತರಗೊಂಡಿರುವ ಜನರಿಗೆ ಅಗತ್ಯ ಸೌಲಭ್ಯಗಳು ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ತಂಡಗಳು ಯಾವಾಗಲೂ ತುರ್ತು ಕಾರ್ಯಾಚರಣೆಗೆ ಸಿದ್ಧವಾಗಿರಬೇಕು ಎಂದೂ ಸೂಚಿಸಿದರು.

 

ಪ್ರಸ್ತುತ ಜಿಲ್ಲೆಯ ಯಾವುದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಡಚಣೆಯಂತಹ ಘಟನೆಗಳು ವರದಿಯಾಗಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಚಾರ್ಮಾಡಿ, ಸಂಪಾಜೆ ಹಾಗೂ ಶಿರಾಡಿ ಸೇರಿದಂತೆ ಪ್ರಮುಖ ಘಾಟ್‌ ರಸ್ತೆಗಳಲ್ಲಿನ ಭೂಕುಸಿತ ಅಥವಾ ಗುಡ್ಡ ಜರಿತದಂತಹ ಘಟನೆಗಳಿಗೆ ತಕ್ಷಣ ಸ್ಪಂದಿಸುವ ವ್ಯವಸ್ಥೆ ಸಿದ್ಧವಾಗಿರಬೇಕು. ಅವುಗಳನ್ನು ಶೀಘ್ರ ತೆರವುಗೊಳಿಸಲು ಅಗತ್ಯ ಯಂತ್ರೋಪಕರಣ ಮತ್ತು ಮೂಲಸೌಕರ್ಯಗಳನ್ನು ಮುಂಚಿತವಾಗಿಯೇ ಸಜ್ಜುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

 

ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ನರ್ವಡೆ ನಾಯಕ್ ಕಾರ್ಭಾರಿ, ಅಪರ ಜಿಲ್ಲಾಧಿಕಾರಿ ರಾಜು ಕೆ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.