ಬೆಳ್ತಂಗಡಿ: ತಾಲೂಕಿನ ರೆಖ್ಯ ಗ್ರಾಮದ ನೇಲಡ್ಕ ಸಮೀಪದ ಮುಚ್ಚಿರಡ್ಕದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ಬೆಳಕಿಗೆ ಬಂದಿದೆ. ಮೃತರನ್ನು ಇಡ್ಯಾಲು ನಿವಾಸಿ ಬಾಲಕೃಷ್ಣ ಗೌಡ (55) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಬಾಲಕೃಷ್ಣ ಗೌಡ ಅವರು ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಸಂಜೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುವ ವೇಳೆ ಕಾಡಾನೆ ದಾಳಿಗೆ ಸಿಲುಕಿರಬಹುದು ಎಂದು ಶಂಕಿಸಲಾಗಿದೆ. ಅವರು ರಾತ್ರಿ ವೇಳೆಯಾದರೂ ಮನೆಗೆ ಬಾರದ ಕಾರಣ ಆತಂಕಗೊಂಡ ಕುಟುಂಬಸ್ಥರು ಹಾಗೂ ಸ್ಥಳೀಯರು ಅವರಿಗಾಗಿ ಹುಡುಕಾಟ ಆರಂಭಿಸಿದರು.
ಹುಡುಕಾಟದ ಸಂದರ್ಭದಲ್ಲಿ ಅವರು ಧರಿಸಿದ್ದ ಪ್ಲಾಸ್ಟಿಕ್ ರೈನ್‌ಕೋಟ್ ದಾರಿಯ ಮಧ್ಯೆ ಪತ್ತೆಯಾಯಿತು. ಅದರ ಸಮೀಪದಲ್ಲೇ ಕಾಡಾನೆಯ ಹೆಜ್ಜೆ ಗುರುತುಗಳು ಕಂಡುಬಂದಿದ್ದು, ಕಾಡಾನೆ ದಾಳಿ ನಡೆಸಿರುವ ಸಾಧ್ಯತೆ ವ್ಯಕ್ತವಾಯಿತು.
ನಂತರ ಸ್ಥಳೀಯರು ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ಮುಂದುವರಿಸಿದಾಗ ಸಮೀಪದ ಕಣಿಯೊಂದರಲ್ಲಿ ಬಾಲಕೃಷ್ಣ ಗೌಡ ಅವರ ಮೃತದೇಹ ಪತ್ತೆಯಾಯಿತು. ಕಾಡಾನೆ ದಾಳಿಯಿಂದಲೇ ಅವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಮಾಹಿತಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.





