ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಲ್ಲಿ ನಿರಂತರ ಧಾರಾಕಾರ ಮಳೆಯ ಪರಿಣಾಮ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಸಾರ್ವಜನಿಕ ಆಸ್ತಿ-ಪಾಸ್ತಿಗೂ ಹಾನಿಯಾಗಿದೆ.
ಪುತ್ರಬೈಲು ಆದರ್ಶನಗರ ರಸ್ತೆ ಸಮೀಪ ಆವರಣ ಗೋಡೆ ಕುಸಿದ ಪರಿಣಾಮ ಉಮೇಶ್ ಆಚಾರ್ಯ ಅವರ ಮನೆಗೆ ಹಾನಿಯಾಗಿದೆ. ಅಧಿಕಾರಿಗಳು ಹಾಗೂ ಸಂಬಂಧಿತ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ರಸ್ತೆಯ ಉಷಾ ಕಾಮತ್ ಅವರ ಮನೆ ಪ್ರವಾಹದ ನೀರಿನಿಂದ ಸುತ್ತುವರಿದಿದ್ದು, ಮನೆಯಲ್ಲಿದ್ದ ನಾಲ್ವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಅಲ್ಲದೆ, ಮನೆಯ ಹೊರಭಾಗದಲ್ಲಿದ್ದ ಎರಡು ಕಾರುಗಳು ಹಾಗೂ ಒಂದು ಬೈಕ್‌ನ್ನೂ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲಾಗಿದೆ.
ಸಂಜೀವ ಗಾಣಿಗ ಅವರ ನಿವಾಸಕ್ಕೂ ಪ್ರವಾಹದ ನೀರು ನುಗ್ಗಿದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಪ್ರಮುಖ ದಾಖಲೆಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಓಡದಕರಿಯ ದೇವಸ್ಥಾನಕ್ಕೂ ನೀರು ಪ್ರವೇಶಿಸಿದ್ದು, ನೀರು ಇಳಿದ ಬಳಿಕ ಕೈಗೊಳ್ಳಬೇಕಾದ ದುರಸ್ತಿ ಹಾಗೂ ಪುನಶ್ಚೇತನ ಕಾಮಗಾರಿಗಳ ಕುರಿತು ದೇವಸ್ಥಾನದ ಪ್ರಮುಖರೊಂದಿಗೆ ಚರ್ಚೆ ನಡೆಸಲಾಗಿದೆ.
ಹೊಳೆ ಸಮೀಪದ ನಿವಾಸಿಗಳಿಗೆ ಭೇಟಿ ನೀಡಿ ಪ್ರವಾಹದ ಅಪಾಯದ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲಾಗಿದೆ. ಶಾಸಕರ ಕಚೇರಿ ಆರಂಭಿಸಿರುವ ತುರ್ತು ಪ್ರವಾಹ ಸಹಾಯವಾಣಿಗೆ ಬಂದ ಮಾಹಿತಿಯ ಆಧಾರದ ಮೇಲೆ ಪುತ್ರಬೈಲು ವಿಶ್ವನಾಥ್ ಗೌಡ ಹಾಗೂ ಪುತ್ರಬೈಲು-ಗುರಿಂಗಾನ ರಸ್ತೆ ನಿವಾಸಿ ಯಶೋಧಾ ಅವರ ಮನೆಗಳಿಗೂ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ.
ಪ್ರವಾಹದಿಂದ ಮನೆಗಳಲ್ಲಿನ ಪೀಠೋಪಕರಣಗಳು ಮತ್ತು ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿರುವುದು ಕಂಡುಬಂದಿದ್ದು, ಹಾನಿಯ ವಿವರಗಳನ್ನು ಸಂಗ್ರಹಿಸಲಾಗಿದೆ. ಓಡದಕರಿಯ ಪ್ರಗತಿಪರ ಕೃಷಿಕ ನಿರಂಜನ್ ಅವರ ಮನೆ ಹಾಗೂ 17 ಹಸುಗಳಿದ್ದ ದನದ ಕೊಟ್ಟಿಗೆ ಸಂಪೂರ್ಣ ಜಲಾವೃತಗೊಂಡಿದೆ. ಪ್ರವಾಹದ ವೇಳೆ ಒಂದು ಆಡು ಮೃತಪಟ್ಟಿರುವುದಾಗಿ ತಿಳಿದುಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಲಾಯಿಲ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅರವಿಂದ್ ಕುಮಾರ್, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಗಣೇಶ್, ಲಾಯಿಲ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಸುಧಾಕರ್ ಬಿ. ಎಲ್., ಮಾಜಿ ಪಂಚಾಯತ್ ಸದಸ್ಯ ಹರಿಕೃಷ್ಣ, ಸ್ಥಳೀಯ ಮುಖಂಡರು, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.





