ಸಕಲೇಶಪುರ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಸಕಲೇಶಪುರ ಸಮೀಪದ ಯಡಕುಮರಿ ಹಾಗೂ ಶಿರಿಬಾಗಿಲು ರೈಲು ನಿಲ್ದಾಣಗಳ ನಡುವಿನ ಅರೆಬೆಟ್ಟ ಪ್ರದೇಶದಲ್ಲಿ ಶನಿವಾರ ರಾತ್ರಿ ಭಾರೀ ಭೂಕುಸಿತ ಸಂಭವಿಸಿದೆ. ಮೈಸೂರು ರೈಲ್ವೆ ವಿಭಾಗದ ಈ ಮಾರ್ಗದಲ್ಲಿ ಮಣ್ಣು ಮತ್ತು ಬೃಹತ್ ಬಂಡೆಗಳು ರೈಲು ಹಳಿಯ ಮೇಲೆ ಜಾರಿಬಿದ್ದ ಪರಿಣಾಮ ಬೆಂಗಳೂರು–ಮಂಗಳೂರು ಹಾಗೂ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲು ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನೈಋತ್ಯ ರೈಲ್ವೆ ಏಳು ಪ್ರಮುಖ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಿದ್ದು, ಕೆಲವು ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದೆ. ಇನ್ನೂ ಕೆಲವು ರೈಲುಗಳನ್ನು ಮಧ್ಯಂತರ ನಿಲ್ದಾಣಗಳಲ್ಲೇ ಸ್ಥಗಿತಗೊಳಿಸಿರುವುದರಿಂದ ವಿವಿಧ ರೈಲು ನಿಲ್ದಾಣಗಳಲ್ಲಿ ನೂರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭಾಗಶಃ ರದ್ದಾದ ರೈಲುಗಳು:
- 16585 ಬೆಂಗಳೂರು–ಮುರುಡೇಶ್ವರ ಎಕ್ಸ್‌ಪ್ರೆಸ್ ಹಾಸನದವರೆಗೆ ಮಾತ್ರ ಸಂಚರಿಸಲಿದ್ದು, ಹಾಸನ–ಮುರುಡೇಶ್ವರ ನಡುವಿನ ಸೇವೆ ರದ್ದಾಗಿದೆ.
- 16511 ಕೆಎಸ್‌ಆರ್ ಬೆಂಗಳೂರು–ಕೊಝಿಕೋಡ್ ಎಕ್ಸ್‌ಪ್ರೆಸ್ ಹಾಸನದಲ್ಲೇ ತನ್ನ ಪ್ರಯಾಣವನ್ನು ಅಂತ್ಯಗೊಳಿಸಲಿದ್ದು, ಹಾಸನ–ಕೊಝಿಕೋಡ್ ಮಾರ್ಗದಲ್ಲಿ ಸಂಚಾರ ಇರುವುದಿಲ್ಲ.
- 17377 ವಿಜಯಪುರ–ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಹಾಸನದವರೆಗೆ ಮಾತ್ರ ಓಡಲಿದ್ದು, ಹಾಸನ–ಮಂಗಳೂರು ನಡುವೆ ಸೇವೆ ಸ್ಥಗಿತಗೊಳಿಸಲಾಗಿದೆ.
- 16595 ಕೆಎಸ್‌ಆರ್ ಬೆಂಗಳೂರು–ಕಾರವಾರ ಎಕ್ಸ್‌ಪ್ರೆಸ್ ಸಕಲೇಶಪುರದಲ್ಲೇ ಕೊನೆಗೊಳ್ಳಲಿದ್ದು, ಅಲ್ಲಿಂದ ಕಾರವಾರದವರೆಗಿನ ಸಂಚಾರ ರದ್ದಾಗಿದೆ.
ಹಿಂತಿರುಗುವ ರೈಲುಗಳಲ್ಲೂ ಬದಲಾವಣೆ:
- 16586 ಮುರುಡೇಶ್ವರ–ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಅಂತ್ಯಗೊಳಿಸಲಿದೆ.
- 16512 ಕೊಝಿಕೋಡ್–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಕಬಕ–ಪುತ್ತೂರುವರೆಗೆ ಮಾತ್ರ ಸಂಚರಿಸಲಿದ್ದು, ಅಲ್ಲಿಂದ ಬೆಂಗಳೂರಿನವರೆಗಿನ ಸೇವೆ ರದ್ದಾಗಿದೆ.
- 17378 ಮಂಗಳೂರು ಸೆಂಟ್ರಲ್–ವಿಜಯಪುರ ಎಕ್ಸ್‌ಪ್ರೆಸ್ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲೇ ಸ್ಥಗಿತಗೊಳ್ಳಲಿದೆ.
ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಮಳೆ ಮುಂದುವರಿದಿರುವುದರಿಂದ ಹಳಿಯ ಮೇಲಿನ ಮಣ್ಣು ಹಾಗೂ ಬಂಡೆಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಅಡಚಣೆ ಉಂಟಾಗಿದೆ. ಆದರೂ ರೈಲ್ವೆ ಸಿಬ್ಬಂದಿ ಯಂತ್ರೋಪಕರಣಗಳ ನೆರವಿನಿಂದ ಹಳಿ ಪುನಶ್ಚೇತನ ಕಾರ್ಯವನ್ನು ನಡೆಸುತ್ತಿದ್ದಾರೆ. ಪ್ರಯಾಣಿಕರು ತಮ್ಮ ಪ್ರಯಾಣ ಆರಂಭಿಸುವ ಮೊದಲು ರೈಲುಗಳ ಸಂಚಾರ ಸ್ಥಿತಿಯನ್ನು ಪರಿಶೀಲಿಸಿ ಬಳಿಕವೇ ಪ್ರಯಾಣಿಸಲು ನೈಋತ್ಯ ರೈಲ್ವೆ ಮನವಿ ಮಾಡಿದೆ.





