ತೀರ್ಥಹಳ್ಳಿ: ರಾಜ್ಯದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಿರಂತರ ಮಳೆಯಿಂದ ಸಂಭವಿಸಿದ ಗುಡ್ಡ ಕುಸಿತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಸೀಬಿನಕೆರೆ ಸಮೀಪದ ಗಾಂಧಿನಗರದಲ್ಲಿ ಶನಿವಾರ (ಆ.02) ಮುಂಜಾನೆ ಈ ಘಟನೆ ಸಂಭವಿಸಿದೆ. ಗುಡ್ಡ ಕುಸಿದು ಮಣ್ಣು ಶೆಡ್ ಮೇಲೆ ಬಿದ್ದ ಪರಿಣಾಮ ಅದರೊಳಗಿದ್ದ ಕುಟುಂಬದ ಸದಸ್ಯರು ಮಣ್ಣಿನಡಿ ಸಿಲುಕಿದ್ದರು. ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಮೂವರು ಮೃತಪಟ್ಟಿರುವುದು ದೃಢಪಟ್ಟಿದೆ. ಘಟನೆಯಲ್ಲಿ ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಕ್ಕರಗೊಳ ಗ್ರಾಮದ ಮಲ್ಲಿಕಾರ್ಜುನ (30), ಅವರ ಪತ್ನಿ ನಾಗವೇಣಿ (27) ಹಾಗೂ ಪುತ್ರ ಸಂತೋಷ್ (3) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಹನುಮಂತಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.





