ಬಂಟ್ವಾಳ: ಬೆಳಗ್ಗಿನ ವೇಳೆಗೆ ಇಳಿಕೆಯಾಗಿದ್ದ ನೇತ್ರಾವತಿ ನದಿಯ ನೀರಿನ ಮಟ್ಟ ಮಧ್ಯಾಹ್ನದ ನಂತರ ಮತ್ತೆ ಏರಿಕೆ ಕಂಡಿದ್ದು, ಬಂಟ್ವಾಳದ ನದಿ ತೀರ ಹಾಗೂ ತಗ್ಗು ಪ್ರದೇಶಗಳ ನಿವಾಸರಲ್ಲಿ ಆತಂಕ ಹೆಚ್ಚಿಸಿದೆ.
ಬೆಳಿಗ್ಗೆ ಸುಮಾರು 7.4 ಮೀಟರ್ ದಾಖಲಾಗಿದ್ದ ನೀರಿನ ಮಟ್ಟ ಮಧ್ಯಾಹ್ನ 1 ಗಂಟೆಯ ಬಳಿಕ ವೇಗವಾಗಿ ಏರಿಕೆಗೊಂಡು 8.3 ಮೀಟರ್‌ಗೆ ತಲುಪಿದೆ. ಅಪಾಯದ ಮಟ್ಟ 8.5 ಮೀಟರ್ ಆಗಿರುವುದರಿಂದ ನದಿ ತೀರದ ನಿವಾಸಿಗಳು ಹಾಗೂ ತಗ್ಗು ಪ್ರದೇಶದ ಜನರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಘಟ್ಟ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನದಿಯ ಹರಿವು ಹೆಚ್ಚಾಗಿದ್ದು, ಕೆಲವು ತಗ್ಗು ಪ್ರದೇಶಗಳಿಗೆ ನೀರು ಪ್ರವೇಶಿಸಲು ಆರಂಭಿಸಿದೆ.
ಬಂಟ್ವಾಳ ಪೇಟೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪೇಟೆ ರಸ್ತೆ ಕೋಟೆಕಣಿ ಭಾಗದಲ್ಲಿ ರಸ್ತೆಯ ಮೇಲೆ ನೀರು ಹರಿದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದೇ ರೀತಿ ಬಡ್ಡಕಟ್ಟೆ ಸಮೀಪದ ರಾಯರಚಾವಡಿ–ಕೋಟೆಕಣಿ ರಸ್ತೆಯ ಮೇಲೆಯೂ ನೀರು ಹರಿದು ಬಂದಿರುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಸುರಕ್ಷತೆಯ ಹಿತದೃಷ್ಟಿಯಿಂದ ಈ ಮಾರ್ಗದಲ್ಲಿ ಸಂಚರಿಸುವುದನ್ನು ಸಾರ್ವಜನಿಕರು ತಪ್ಪಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ವಾಹನ ಸವಾರರು ಬೈಪಾಸ್ ಮಾರ್ಗದ ಮೂಲಕ ಮುಖ್ಯ ರಸ್ತೆಯನ್ನು ಬಳಸುವಂತೆ ಸೂಚಿಸಲಾಗಿದೆ. ಸಂಜೆ ವೇಳೆಯಲ್ಲೂ ಮಳೆ ಮುಂದುವರಿದರೆ ನದಿಯ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.





