ಬಂಟ್ವಾಳ: ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೀವನ್ ಪಿಂಟೋ (48) ಶನಿವಾರ ರಾತ್ರಿ ಮನೆಯಿಂದ ಹೊರಟ ಬಳಿಕ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಕೆಲವು ತಿಂಗಳ ಹಿಂದೆ ವಿದೇಶದಿಂದ ಊರಿಗೆ ಬಂದಿದ್ದ ಜೀವನ್ ಪಿಂಟೋ ಅವರು, ಶೀಘ್ರದಲ್ಲೇ ಮತ್ತೆ ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದರು. ಶನಿವಾರ ರಾತ್ರಿ ಸುರಿಯುತ್ತಿದ್ದ ಭಾರೀ ಮಳೆಯ ನಡುವೆಯೇ, ತೋಡಿನ ಆಚೆ ಭಾಗದಲ್ಲಿರುವ ತಮ್ಮ ಮಾವನ ಮನೆಗೆ ತೆರಳಲು ಕೈಯಲ್ಲಿ ಟಾರ್ಚ್ ಹಿಡಿದು ಮನೆಯಿಂದ ಹೊರಟಿದ್ದರು. ಅಲ್ಲಿಗೆ ತೆರಳಲು ತೋಡಿನ ಮೇಲಿನ ಸಣ್ಣ ಸೇತುವೆ ದಾಟಬೇಕಾಗಿತ್ತು.
ಆದರೆ ಅವರು ಬಹಳ ಹೊತ್ತಾದರೂ ಮಾವನ ಮನೆ ತಲುಪದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ಆರಂಭಿಸಿದರು. ಈ ವೇಳೆ ತುಂಬಿ ಹರಿಯುತ್ತಿದ್ದ ತೋಡಿನ ಸಮೀಪ ಜೀವನ್ ಅವರ ಟಾರ್ಚ್ ಹಾಗೂ ಚಪ್ಪಲಿ ಪತ್ತೆಯಾಗಿದ್ದು, ಕಾಲು ಜಾರಿ ನೀರಿಗೆ ಬಿದ್ದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಶನಿವಾರ ರಾತ್ರಿಯಿಂದಲೇ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಭಾನುವಾರವೂ ಕಾರ್ಯಾಚರಣೆ ಮುಂದುವರಿದಿದ್ದರೂ, ಈವರೆಗೆ ಜೀವನ್ ಪಿಂಟೋ ಅವರ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ.





