21 September 2026 |

ಕಾಡಾನೆ ದಾಳಿಗೆ ಬಲಿಯಾದ ಬೆಳ್ತಂಗಡಿ ನಿವಾಸಿ: ₹5 ಲಕ್ಷ ತುರ್ತು ಪರಿಹಾರ ವಿತರಣೆ, ಶಾಶ್ವತ ಪರಿಹಾರಕ್ಕೆ ಸ್ಥಳೀಯರ ಆಗ್ರಹ

  • 03 Aug 2026 09:40:50 AM

ಬೆಳ್ತಂಗಡಿ: ನೆಲ್ಯಾಡಿ ಸಮೀಪದ ರೇಖ್ಯಾ ಗ್ರಾಮದ ನೆಲ್ಯಡ್ಕ-ಇದ್ಮಾಳ್ ನಿವಾಸಿ ಬಾಲಕೃಷ್ಣ ಗೌಡ ಅವರು ಕಾಡಾನೆ ದಾಳಿಯಲ್ಲಿ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅವರ ಕುಟುಂಬಕ್ಕೆ ₹5 ಲಕ್ಷ ಮೊತ್ತದ ತುರ್ತು ಪರಿಹಾರದ ಚೆಕ್ ಅನ್ನು ಹಸ್ತಾಂತರಿಸಿದೆ.

 

ಶನಿವಾರ ಸಂಜೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಬಾಲಕೃಷ್ಣ ಗೌಡ ನಾಪತ್ತೆಯಾಗಿದ್ದರು. ಬಳಿಕ ಅವರು ತೆರಳಿದ್ದ ಮಾರ್ಗದಲ್ಲಿ ರೈನ್‌ಕೋಟ್ ಹಾಗೂ ಕಾಡಾನೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. ಭಾನುವಾರ ಅರಣ್ಯ ಇಲಾಖೆ ಮತ್ತು ಸ್ಥಳೀಯರು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅವರ ಮೃತದೇಹ ಪತ್ತೆಯಾಯಿತು.

 

ಘಟನಾ ಸ್ಥಳ ಹಾಗೂ ಮೃತರ ನಿವಾಸಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ದಕ್ಷಿಣ ಕನ್ನಡ ಜಿಲ್ಲಾ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ರವಿಶಂಕರ್ (ಐಎಫ್‌ಎಸ್) ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

 

ಈ ಕುರಿತು ಮಾಹಿತಿ ನೀಡಿದ ಡಿಸಿಎಫ್ ರವಿಶಂಕರ್, ಸರ್ಕಾರದ ಹೊಸ ನಿಯಮದಂತೆ ಮೃತರ ಕುಟುಂಬಕ್ಕೆ ಒಟ್ಟು ₹20 ಲಕ್ಷ ಪರಿಹಾರ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಿಳಿಸಿದರು. ಜೊತೆಗೆ, ನಿಯಮಾನುಸಾರ ಪ್ರತಿ ತಿಂಗಳು ₹5,000 ಮಾಸಾಶನವನ್ನೂ ಕುಟುಂಬಕ್ಕೆ ನೀಡಲಾಗುವುದು ಎಂದು ಹೇಳಿದರು.

 

ಇದೇ ವೇಳೆ ಸುಳ್ಯ, ಕಡಬ, ಬೆಳ್ತಂಗಡಿ ಹಾಗೂ ಪುತ್ತೂರು ಭಾಗಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಿ, ಆನೆಗಳ ಉಪಟಳ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಸರ್ಕಾರವನ್ನು ಆಗ್ರಹಿಸಿದ್ದಾರೆ.