ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಗ್ರಾಮದಲ್ಲಿ ಸುಮಾರು 6.20 ಎಕರೆ ಜಮೀನು ‘ರಾಷ್ಟ್ರಪತಿ, ಕೇಂದ್ರ ಸರ್ಕಾರ’ ಹೆಸರಿನಲ್ಲಿ ದಾಖಲಾಗಿರುವ ಮಾಹಿತಿ ಸರ್ಕಾರದ ದಿಶಾಂಕ್ ಆ್ಯಪ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ಉಜಿರೆಯ ಸರ್ವೇ ನಂ. 208ರಲ್ಲಿ ದಾಖಲಾಗಿರುವ ಈ ಜಮೀನು, ಎಚ್‌ಪಿ ಪೆಟ್ರೋಲ್ ಬಂಕ್‌ನಿಂದ ಬೆಳಾಲು ಕ್ರಾಸ್‌ವರೆಗೆ ವ್ಯಾಪಿಸಿರುವ ಪ್ರದೇಶಕ್ಕೆ ಸಂಬಂಧಿಸಿದೆ ಎನ್ನಲಾಗಿದೆ. ಇದೇ ಸರ್ವೇ ಸಂಖ್ಯೆಯಲ್ಲಿ ಇತರ ವ್ಯಕ್ತಿಗಳ ಹೆಸರಿನಲ್ಲಿಯೂ ಭೂ ದಾಖಲೆಗಳಿರುವುದಾಗಿ ತಿಳಿದುಬಂದಿದೆ.
ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಇಂಡಿಯಾ (ACCEI)ಯ ಮಾಜಿ ಅಧ್ಯಕ್ಷ ಹಾಗೂ ಎಂಜಿನಿಯರ್ ಜಗದೀಶ್ ಪ್ರಸಾದ್ ಅವರು ದಿಶಾಂಕ್ ಆ್ಯಪ್ ಪರಿಶೀಲಿಸಿದ ವೇಳೆ ಈ ಮಾಹಿತಿ ಬೆಳಕಿಗೆ ಬಂದಿದೆ. ಭೂ ದಾಖಲೆಯಲ್ಲಿ ಈ ರೀತಿಯ ನಮೂದು ಹೇಗೆ ದಾಖಲಾಗಿದೆ ಎಂಬ ಬಗ್ಗೆ ಕಂದಾಯ ಇಲಾಖೆ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಸ್ತುತ ಈ ಕುರಿತು ಕಂದಾಯ ಇಲಾಖೆಯಿಂದ ಯಾವುದೇ ಅಧಿಕೃತ ಸ್ಪಷ್ಟನೆ ಪ್ರಕಟವಾಗಿಲ್ಲ. ದಾಖಲೆಗಳ ಸ್ವರೂಪ ಹಾಗೂ ಮಾಲೀಕತ್ವದ ವಿವರಗಳ ಬಗ್ಗೆ ಇಲಾಖೆ ಸ್ಪಷ್ಟನೆ ನೀಡಿದ ಬಳಿಕವೇ ನಿಖರ ಚಿತ್ರಣ ಲಭ್ಯವಾಗುವ ಸಾಧ್ಯತೆ ಇದೆ.





