06 August 2026 |

ಬಂಟ್ವಾಳ: ಮತ್ತೆ ಏರಿದ ನೇತ್ರಾವತಿ ನೀರಿನ ಮಟ್ಟ, ನದಿ ತೀರದ ಜನರಲ್ಲಿ ಆತಂಕ

  • 03 Aug 2026 10:12:25 AM

ಬಂಟ್ವಾಳ: ಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನೇತ್ರಾವತಿ ನದಿಯ ನೀರಿನ ಮಟ್ಟ ಮತ್ತೆ ಏರಿಕೆಯಾಗಿದ್ದು, ನದಿ ತೀರದ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ. ಬೆಳಿಗ್ಗೆ ಇಳಿಮುಖವಾಗಿದ್ದ ನೀರಿನ ಮಟ್ಟ ಮಧ್ಯಾಹ್ನದ ಬಳಿಕ ಹಠಾತ್ ಏರಿಕೆ ಕಂಡಿದೆ. ಬೆಳಿಗ್ಗೆ ಸುಮಾರು 7.4 ಮೀಟರ್ ಇದ್ದ ಮಟ್ಟ ಮಧ್ಯಾಹ್ನ 1 ಗಂಟೆಯ ನಂತರ 8.3 ಮೀಟರ್‌ಗೆ ತಲುಪಿದೆ.

 

ನದಿಯ ಅಪಾಯದ ಮಟ್ಟ 8.5 ಮೀಟರ್ ಆಗಿರುವುದರಿಂದ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಹಾಗೂ ನದಿ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

 

ಘಟ್ಟ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಲಾರಂಭಿಸಿದೆ. ಇದೇ ವೇಳೆ ಬಂಟ್ವಾಳ ಪೇಟೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಪ್ರಮುಖ ಪೇಟೆ ರಸ್ತೆ ಕೋಟೆಕಣಿ ಭಾಗದಲ್ಲಿ ಜಲಾವೃತಗೊಂಡಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

 

ಪರಿಸ್ಥಿತಿಯನ್ನು ಅಧಿಕಾರಿಗಳು ನಿಕಟವಾಗಿ ಗಮನಿಸುತ್ತಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.