21 September 2026 |

ಎಡಕುಮೇರಿ ಗುಡ್ಡಕುಸಿತ ಪರಿಣಾಮ: ಮಂಗಳೂರು–ಬೆಂಗಳೂರು ಮಾರ್ಗದಲ್ಲಿ ಇಂದೂ ರೈಲು ಸಂಚಾರ ವ್ಯತ್ಯಯ

  • 03 Aug 2026 10:28:37 AM

ಮಂಗಳೂರು: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಎಡಕುಮೇರಿ–ಶಿರಿಬಾಗಿಲು ಮಧ್ಯೆ ರೈಲ್ವೆ ಹಳಿಯ ಮೇಲೆ ಸಂಭವಿಸಿದ ಗುಡ್ಡಕುಸಿತದಿಂದ ಮಂಗಳೂರು–ಬೆಂಗಳೂರು ರೈಲು ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಶನಿವಾರ ರಾತ್ರಿ ಆರಂಭವಾದ ಮಣ್ಣು ತೆರವು ಕಾರ್ಯಾಚರಣೆ ಮಳೆಯ ನಡುವೆಯೂ ಮುಂದುವರಿದಿದ್ದರೂ, ಭಾನುವಾರವೂ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದ್ದು, ಕೆಲವು ರೈಲುಗಳನ್ನು ಬದಲಿ ಮಾರ್ಗದಲ್ಲಿ ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

 

ನಿರಂತರ ಮಳೆಯಿಂದ ಗುಡ್ಡದಿಂದ ಮತ್ತೆ ಮತ್ತೆ ಮಣ್ಣು ಜಾರುತ್ತಿರುವ ಕಾರಣ ತೆರವು ಕಾರ್ಯಕ್ಕೆ ಅಡಚಣೆ ಉಂಟಾಗಿದೆ. ರೈಲ್ವೆ ಹಳಿಯ ಮೇಲೆ ಕೆಸರು ತುಂಬಿಕೊಂಡಿದ್ದು, ಗುಡ್ಡದ ಮೇಲ್ಭಾಗದಿಂದ ನೀರು ಹರಿದು ಬರುತ್ತಿದೆ. ಹೀಗಾಗಿ ಮತ್ತಷ್ಟು ಮಣ್ಣು ಕುಸಿಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಿಬ್ಬಂದಿ ಮರಳಿನ ಚೀಲಗಳನ್ನು ಬಳಸಿ ತಾತ್ಕಾಲಿಕ ತಡೆಗೋಡೆ ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

 

ಗುಡ್ಡಕುಸಿತದ ಹಿನ್ನೆಲೆಯಲ್ಲಿ ಯಶವಂತಪುರ–ಕಾರವಾರ ಎಕ್ಸ್‌ಪ್ರೆಸ್‌, ಮಂಗಳೂರು–ಯಶವಂತಪುರ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ ಹಾಗೂ ಕಾರವಾರ–ಕೆಎಸ್‌ಆರ್ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರವನ್ನು ಇಂದಿಗೂ ಸ್ಥಗಿತಗೊಳಿಸಲಾಗಿದೆ.

 

ಇದೇ ವೇಳೆ ಬೆಂಗಳೂರು–ಮುರ್ಡೇಶ್ವರ ಎಕ್ಸ್‌ಪ್ರೆಸ್‌, ರೈಲು ಸಂಖ್ಯೆ 17377 ವಿಜಯಪುರ–ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್‌ ಹಾಗೂ 17378 ಮಂಗಳೂರು ಸೆಂಟ್ರಲ್–ವಿಜಯಪುರ ಎಕ್ಸ್‌ಪ್ರೆಸ್‌ ರೈಲುಗಳನ್ನು ಪರ್ಯಾಯ ಮಾರ್ಗದ ಮೂಲಕ ಸಂಚರಿಸುವಂತೆ ರೈಲ್ವೆ ಇಲಾಖೆ ವ್ಯವಸ್ಥೆ ಮಾಡಿದೆ.