04 August 2026 |

ಮಳೆ ಆರಂಭದಲ್ಲೇ ಅಡಿಕೆ ತೋಟಗಳಲ್ಲಿ ಕೊಳೆರೋಗ; ರೈತರಲ್ಲಿ ಹೆಚ್ಚಿದ ಆತಂಕ

  • 03 Aug 2026 12:23:38 PM

ಬಂಟ್ವಾಳ: ಈ ವರ್ಷದ ಮುಂಗಾರು ಮಳೆಯ ಪ್ರಮಾಣ ನಿರೀಕ್ಷೆಗಿಂತ ಕಡಿಮೆಯಿದ್ದರೂ, ಬಂಟ್ವಾಳ ತಾಲೂಕಿನ ಕೆಲವು ಪ್ರದೇಶಗಳ ಅಡಿಕೆ ತೋಟಗಳಲ್ಲಿ ಕೊಳೆರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭಿಸಿರುವುದು ರೈತರಲ್ಲಿ ಕಳವಳ ಮೂಡಿಸಿದೆ.

 

ಕಳೆದ ವರ್ಷ ಮುಂಗಾರು ಮುಂಚಿತವಾಗಿಯೇ ಆರಂಭಗೊಂಡು ಸುರಿದ ಭಾರೀ ಹಾಗೂ ನಿರಂತರ ಮಳೆಯಿಂದ ತಾಲೂಕಿನ ಬಹುತೇಕ ಅಡಿಕೆ ತೋಟಗಳು ಕೊಳೆರೋಗದ ಬಾಧೆಗೆ ಒಳಗಾಗಿದ್ದವು. ಪರಿಣಾಮ ಅನೇಕ ರೈತರು ದೊಡ್ಡ ಮಟ್ಟದ ಆರ್ಥಿಕ ನಷ್ಟ ಅನುಭವಿಸಿದ್ದರು. ಮಳೆ ನಿರಂತರವಾಗಿ ಸುರಿದ ಕಾರಣ ತೋಟಗಳಿಗೆ ತೆರಳಿ ಬೋರ್ಡ್ ದ್ರಾವಣ ಸಿಂಪಡಿಸುವುದಕ್ಕೂ ಅವಕಾಶ ಸಿಗದೆ, ರೋಗ ನಿಯಂತ್ರಣ ಕಷ್ಟಕರವಾಗಿತ್ತು.

 

ಈ ಬಾರಿ ಮಳೆಯ ಪ್ರಮಾಣ ಕಡಿಮೆಯಿರುವುದರಿಂದ ಕೊಳೆರೋಗದ ಸಮಸ್ಯೆ ಹೆಚ್ಚಾಗುವುದಿಲ್ಲ ಎಂಬ ನಿರೀಕ್ಷೆ ರೈತರಲ್ಲಿತ್ತು. ಆದರೆ, ಈಗಾಗಲೇ ಕೆಲ ತೋಟಗಳಲ್ಲಿ ರೋಗದ ಲಕ್ಷಣಗಳು ಗೋಚರಿಸಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

 

ಗಮನಾರ್ಹ ಸಂಗತಿಯೆಂದರೆ, ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಬಾರಿ ಬೋರ್ಡ್ ದ್ರಾವಣ ಸಿಂಪಡಣೆ ನಡೆಸಿದ್ದ ತೋಟಗಳಲ್ಲಿಯೇ ರೋಗದ ಲಕ್ಷಣಗಳು ಕಂಡುಬಂದಿರುವುದು ರೈತರ ಚಿಂತೆಗೆ ಕಾರಣವಾಗಿದೆ.

 

ಈ ಕುರಿತು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಜೊ. ಪ್ರದೀಪ್ ಡಿಸೋಜ ಪ್ರತಿಕ್ರಿಯಿಸಿ, ಈವರೆಗೆ ತಾಲೂಕಿನ ಯಾವುದೇ ಭಾಗದಿಂದ ಅಡಿಕೆ ಕೊಳೆರೋಗದ ಬಗ್ಗೆ ಮಾಹಿತಿ ಬಂದಿರಲಿಲ್ಲ. ಇದೀಗ ದೊರೆತಿರುವುದು ಈ ಸಾಲಿನ ಮೊದಲ ಪ್ರಕರಣವಾಗಿದ್ದು, ಮಳೆಯ ಪ್ರಮಾಣ ಕಡಿಮೆಯಿರುವುದರಿಂದ ರೋಗ ವ್ಯಾಪಕವಾಗಿ ಹರಡುವ ಸಾಧ್ಯತೆ ಕಡಿಮೆ ಇದೆ. ಆದರೂ ಮಾಹಿತಿ ಬಂದಿರುವ ತೋಟಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

 

ಇದಲ್ಲದೆ, ಕಳೆದ ವರ್ಷ ಕೊಳೆರೋಗ ಹೆಚ್ಚು ಕಾಣಿಸಿಕೊಂಡಿದ್ದ ತೋಟಗಳಲ್ಲಿ ರೋಗದ ಕ್ರಿಮಿಗಳು ಅಡಿಕೆ ಬುಡದಲ್ಲಿ ಉಳಿದಿರುವ ಸಾಧ್ಯತೆ ಇದೆ. ಅಂತಹ ತೋಟಗಳಲ್ಲಿ ಈ ವರ್ಷವೂ ಮತ್ತೆ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.