ನವದೆಹಲಿ: ಮಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ 17.5 ಲಕ್ಷ ಟನ್ ಸಾಮರ್ಥ್ಯದ ಕಚ್ಚಾತೈಲ ಸಂಗ್ರಹ ಘಟಕದ ಒಟ್ಟು ಸಾಮರ್ಥ್ಯದ ಅರ್ಧ ಭಾಗವನ್ನು ರಾಷ್ಟ್ರೀಯ ತೈಲ ಸಂಗ್ರಹಕ್ಕಾಗಿ ಮೀಸಲಿಡಲಾಗಿದ್ದು, ಉಳಿದ ಅರ್ಧ ಭಾಗವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ತೈಲ ಸಂಸ್ಥೆಯಾದ ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ಒಎನ್‌ಜಿಸಿ) ಈ ಕಚ್ಚಾತೈಲ ಸಂಗ್ರಹ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿದೆ.
ಈ ಯೋಜನೆಯ ಮೂಲಕ ದೇಶದ ತೈಲ ಭದ್ರತೆಯನ್ನು ಬಲಪಡಿಸುವುದರ ಜೊತೆಗೆ ವಾಣಿಜ್ಯ ಚಟುವಟಿಕೆಗಳಿಗೂ ಅವಕಾಶ ಕಲ್ಪಿಸಲಾಗುತ್ತಿದೆ.
ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ಲಿಖಿತ ಉತ್ತರ ನೀಡಿದ್ದು, 2021ರಲ್ಲಿ ಕರ್ನಾಟಕ ಹಾಗೂ ಒಡಿಶಾ ರಾಜ್ಯಗಳಲ್ಲಿ ಒಟ್ಟು 65 ಲಕ್ಷ ಟನ್ ಸಾಮರ್ಥ್ಯದ ಎರಡು ಹೊಸ ಕಚ್ಚಾತೈಲ ಸಂಗ್ರಹ ಘಟಕಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದಾಗಿ ತಿಳಿಸಿದ್ದಾರೆ.





