ಪುತ್ತೂರು: ಯಾವುದೇ ಮಾನ್ಯ ದಾಖಲೆಗಳಿಲ್ಲದೆ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ಉಪ್ಪಿನಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಸೋಮವಾರ (ಆ.3) ಉಪ್ಪಿನಂಗಡಿ ಸಮೀಪದ ಮಠ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನವನ್ನು ತಡೆದು ಪರಿಶೀಲಿಸಿದ ವೇಳೆ, ಸಕಲೇಶಪುರದಿಂದ ಮಂಗಳೂರಿನತ್ತ ಮರದ ದಿಮ್ಮಿಗಳನ್ನು ಸಾಗಿಸಲಾಗುತ್ತಿದ್ದು, ಅದಕ್ಕೆ ಅಗತ್ಯ ದಾಖಲೆಗಳು ಇಲ್ಲದಿರುವುದು ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ನಿವಾಸಿ ರೋಹಿತ್ ಎಸ್. ಎಲ್. ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ವಶಪಡಿಸಿಕೊಂಡ ವಾಹನ ಮತ್ತು ಮರದ ದಿಮ್ಮಿಗಳ ಒಟ್ಟು ಮೌಲ್ಯ ಸುಮಾರು ₹10 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಕುರಿತು ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದೆ.
ಕಾರ್ಯಾಚರಣೆಯನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಎಚ್.ಪಿ. ರಾಘವೇಂದ್ರ ಅವರ ನೇತೃತ್ವದಲ್ಲಿ ನಡೆಸಲಾಗಿದ್ದು, ಉಪ ವಲಯ ಅರಣ್ಯಾಧಿಕಾರಿ ವಿನಯ್ ಕುಮಾರ್, ಗಸ್ತು ಅರಣ್ಯ ಪಾಲಕರಾದ ವಿನಯಚಂದ್ರ, ದೀಕ್ಷಾ ಕೆ. ಹಾಗೂ ಚಾಲಕ ಕಿಶೋರ್ ಕುಮಾರ್ ಕೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.





