ಬಂಟ್ವಾಳ: ತಾಲೂಕಿನ ಮುಲ್ಲರಪಟ್ನ ಮತ್ತು ಮುತ್ತೂರು ಗ್ರಾಮಗಳನ್ನು ಬೆಸೆಯುವ ಫಲ್ಗುಣಿ ನದಿ ತೂಗುಸೇತುವೆಯು ದಕ್ಷಿಣ ಕನ್ನಡ ಜಿಲ್ಲೆಯ ಬಡಗ ಬೆಳ್ಳೂರು ವ್ಯಾಪ್ತಿಯಲ್ಲಿದೆ. ಈ ತೂಗು ಸೇತುವೆ ಇದು ತುರ್ತು ನಿರ್ವಹಣೆಯ ಕಾಯುತ್ತಿದೆ. ಕಳೆದ ಸುಮಾರು 10 ವರ್ಷಗಳಿಂದ ಸಮರ್ಪಕ ನಿರ್ವಹಣೆ ಕಾಣದೆ ಅಪಾಯದ ಅಂಚಿನಲ್ಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
2016ರಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಉದ್ಘಾಟಿಸಲಾದ ಈ ತೂಗು ಸೇತುವೆ ಇಂದು ದುಸ್ಥಿತಿಗೆ ತಲುಪಿದ್ದು, ಪ್ರತಿದಿನ ಶಾಲಾ ಮಕ್ಕಳು ಸೇರಿದಂತೆ ನೂರಾರು ಮಂದಿ ಇದೇ ಸೇತುವೆಯನ್ನು ಅವಲಂಬಿಸಿ ಸಂಚಾರ ಮಾಡುತ್ತಿದ್ದಾರೆ.
ಸ್ಥಳೀಯರ ಮಾಹಿತಿಯಂತೆ, ಸೇತುವೆಯ ಒಂದು ಭಾಗ ಈಗಾಗಲೇ ಕೆಳಕ್ಕೆ ಬಾಗಲು ಆರಂಭಿಸಿದ್ದು, ಜನರು ನಡೆಯುವಾಗ ಸೇತುವೆ ಅತಿಯಾಗಿ ಅಲ್ಲಾಡುತ್ತಿದೆ. ಸೇತುವೆಯ ಗ್ರಿಲ್‌ಗಳು ಹಾಗೂ ಬೆಂಬಲ ನೀಡುವ ಕಬ್ಬಿಣದ ರಾಡ್‌ಗಳಿಗೆ ತುಕ್ಕು ಹಿಡಿದಿದ್ದು, ಹಲವು ವರ್ಷಗಳಿಂದ ಬೋಲ್ಟ್ ಹಾಗೂ ಸ್ಕ್ರೂಗಳ ಪರಿಶೀಲನೆ, ಬಿಗಿತ ಹಾಗೂ ಅಗತ್ಯ ಗ್ರೀಸಿಂಗ್ ಕೆಲಸವೂ ನಡೆದಿಲ್ಲ ಎನ್ನಲಾಗಿದೆ.
ಕೊಳತಮಜಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸುಮಾರು 350 ಮನೆಗಳ ನಿವಾಸಿಗಳು ಈ ಸೇತುವೆಯನ್ನು ದೈನಂದಿನ ಸಂಚಾರಕ್ಕೆ ಬಳಸುತ್ತಿದ್ದಾರೆ. ಅದರಲ್ಲೂ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದೇ ಮಾರ್ಗದಲ್ಲಿ ಓಡಾಡುತ್ತಿರುವುದರಿಂದ ಪೋಷಕರು ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
“ದುರಂತ ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವುದಕ್ಕಿಂತ ಮುನ್ನವೇ ಸಂಬಂಧಪಟ್ಟ ಇಲಾಖೆ ಸೇತುವೆಯ ತಾಂತ್ರಿಕ ಪರಿಶೀಲನೆ ನಡೆಸಿ ಅಗತ್ಯ ದುರಸ್ತಿ ಕಾರ್ಯಗಳನ್ನು ತಕ್ಷಣ ಕೈಗೊಳ್ಳಬೇಕು. ಯಾವುದೇ ಅನಾಹುತ ಸಂಭವಿಸದಂತೆ ಈಗಲೇ ಕ್ರಮವಹಿಸಬೇಕು” ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸೇತುವೆಯ ದುಸ್ಥಿತಿಯಿಂದಾಗಿ ಸ್ಥಳೀಯರಲ್ಲಿ ಅಸಮಾಧಾನ ಹೆಚ್ಚಾಗಿದ್ದು, ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸಮಗ್ರ ನಿರ್ವಹಣೆ ಕೈಗೊಳ್ಳಬೇಕೆಂದು ಜನರು ಒತ್ತಾಯಿಸಿದ್ದಾರೆ.





