05 August 2026 |

ಭಾರೀ ಮಳೆಯ ಬಳಿಕವೂ ಉಪ್ಪಿನಂಗಡಿಯಲ್ಲಿ ಆಗಲಿಲ್ಲ ಸಂಗಮ; ಕೊನೆಯ ಕ್ಷಣದಲ್ಲಿ ಇಳಿದ ನೀರಿನ ಮಟ್ಟ

  • 04 Aug 2026 07:13:57 PM

ಉಪ್ಪಿನಂಗಡಿ: ಕಳೆದ ವಾರ ಪಶ್ಚಿಮ ಘಟ್ಟ ಪ್ರದೇಶ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸುರಿದ ಭಾರೀ ಮಳೆಯಿಂದ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ನೀರಿನ ಮಟ್ಟದಲ್ಲಿ ಭಾರೀ ಏರಿಕೆಯಾಗಿತ್ತು. ಬಂಟ್ವಾಳ, ಪಾಣೆಮಂಗಳೂರು ಸೇರಿದಂತೆ ನದಿ ತೀರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಕೆಲವೆಡೆ ನೀರು ಅಪಾಯದ ಮಟ್ಟದ ಸಮೀಪಕ್ಕೂ ತಲುಪಿತ್ತು.

 

ಉಪ್ಪಿನಂಗಡಿಯಲ್ಲಿಯೂ ನೇತ್ರಾವತಿ–ಕುಮಾರಧಾರಾ ನದಿಗಳ ನೀರಿನ ಮಟ್ಟ ವೇಗವಾಗಿ ಏರಿಕೆಯಾಗಿದ್ದರಿಂದ, ಐತಿಹಾಸಿಕ ಸಂಗಮ ಸಂಭವಿಸುವ ನಿರೀಕ್ಷೆ ಭಕ್ತರು ಹಾಗೂ ಸ್ಥಳೀಯರಲ್ಲಿ ಹೆಚ್ಚಿತ್ತು. ವಿಶೇಷವಾಗಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ಆಗಮಿಸುವ ಭಕ್ತರು ಈ ಪುಣ್ಯ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದರು.

 

ಆದರೆ ನೀರಿನ ಮಟ್ಟ ಸಂಗಮ ಸಂಭವಿಸಲು ಅಗತ್ಯವಿರುವ ಮಟ್ಟವನ್ನು ತಲುಪುವ ಮುನ್ನವೇ ಮಳೆ ಪ್ರಮಾಣ ಕಡಿಮೆಯಾಗಿದ್ದು, ಇದೀಗ ಎರಡೂ ನದಿಗಳ ನೀರಿನ ಮಟ್ಟ ಗಣನೀಯವಾಗಿ ಇಳಿಮುಖವಾಗಿದೆ. ಇದರಿಂದ ಈ ಬಾರಿ ನಿರೀಕ್ಷಿಸಿದ್ದ ಸಂಗಮ ಭಕ್ತರಿಗೆ ನಿರಾಸೆ ಮೂಡಿಸಿದೆ.

 

ಆದರೂ ಮುಂಗಾರು ಇನ್ನೂ ಮುಗಿದಿಲ್ಲ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮತ್ತೆ ಭಾರೀ ಮಳೆಯಾದರೆ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿ, ಮುಂದಿನ ದಿನಗಳಲ್ಲಿ ಸಂಗಮ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಿದ್ದಾರೆ.

 

ಉಪ್ಪಿನಂಗಡಿಯ ಸಂಗಮವು ಧಾರ್ಮಿಕವಾಗಿ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಡುತ್ತಿದ್ದು, ಪ್ರತಿವರ್ಷ ಸಾವಿರಾರು ಭಕ್ತರು ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ.