06 August 2026 |

ದಕ್ಷಿಣ ಕನ್ನಡದಲ್ಲಿ ವ್ಯಾಪಕ ಮಳೆ ಮುಂದುವರಿಕೆ; ಆರೆಂಜ್ ಅಲರ್ಟ್ ಜಾರಿ, ಇಂದು ಸಚಿವ ಖಾದರ್ ಮಳೆಹಾನಿ ಪ್ರದೇಶಗಳಿಗೆ ಭೇಟಿ

  • 05 Aug 2026 11:36:39 AM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಹಲವೆಡೆ ಮಳೆಯ ಅಬ್ಬರ ಮುಂದುವರಿದಿದೆ. ಸೋಮವಾರ ರಾತ್ರಿ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ನೆರೆ ಪರಿಸ್ಥಿತಿ ಉಂಟಾಗಿತ್ತು.

 

ಪುತ್ತೂರು, ಉಪ್ಪಿನಂಗಡಿ, ಕರಾಯ, ಕಲ್ಲೇರಿ, ಮಡಂತ್ಯಾರು, ಗುರುವಾಯನಕೆರೆ, ಧರ್ಮಸ್ಥಳ, ಕೊಕ್ಕಡ, ವೇಣೂರು, ನೆಲ್ಯಾಡಿ, ಕಡಬ, ಸುಳ್ಯ, ಸುಬ್ರಹ್ಮಣ್ಯ, ಬೆಳ್ಳಾರೆ, ಪಂಜ, ಕಲ್ಮಕಾರು, ಮೂಡುಬಿದಿರೆ, ಮೂಲ್ಕಿ, ಪಣಂಬೂರು, ಉಳ್ಳಾಲ, ಬಜಪೆ, ವಿಟ್ಲ, ಕನ್ಯಾನ ಹಾಗೂ ಪೆರುವಾಯಿ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.

 

ಮಂಗಳೂರು ನಗರದಲ್ಲೂ ಬೆಳಗಿನ ಜಾವ ಉತ್ತಮ ಮಳೆಯಾಗಿದ್ದು, ನಂತರ ಮಧ್ಯಂತರವಾಗಿ ಸಾಧಾರಣ ಮಳೆ ಸುರಿಯಿತು. ಬಿಜೈ ಕಾಪಿಕಾಡ್ 7ನೇ ಅಡ್ಡರಸ್ತೆಯಲ್ಲಿರುವ ಕುದ್ಮುಲ್ ರಂಗರಾವ್ ಸಭಾಂಗಣದ ಸಮೀಪದ ಮನೆಯೊಂದರ ಹಿಂಭಾಗಕ್ಕೆ ಆವರಣ ಗೋಡೆ ಕುಸಿದು ಬಿದ್ದಿದೆ. ಗೋಡೆ ಕುಸಿದ ರಭಸಕ್ಕೆ ಮನೆಯ ಹಿಂಭಾಗದ ಗೋಡೆಯೂ ಹಾನಿಗೊಳಗಾಗಿದೆ. ಘಟನೆ ಸಂಭವಿಸಿದ ವೇಳೆ ಮನೆಯ ಹಿಂಭಾಗದಲ್ಲಿ ಬಾಲಕಿಯೊಬ್ಬಳು ಮಲಗಿದ್ದರೂ, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಮಾಜಿ ಮೇಯರ್ ಎಂ. ಶಶೀಧರ ಹೆಗ್ಡೆ ಹಾಗೂ ಮಹಾನಗರ ಪಾಲಿಕೆಯ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಆಗಸ್ಟ್ 5ರ ಬೆಳಗ್ಗೆ 8.30ರವರೆಗೆ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ನಂತರ ಆಗಸ್ಟ್ 7ರವರೆಗೆ ಯೆಲ್ಲೋ ಅಲರ್ಟ್ ಜಾರಿಯಲ್ಲಿದ್ದು, ಜಿಲ್ಲೆಯಲ್ಲಿ ಇನ್ನೂ ಕೆಲ ದಿನಗಳ ಕಾಲ ಉತ್ತಮ ಮಳೆ ಮುಂದುವರಿಯುವ ಸಾಧ್ಯತೆ ಇದೆ.

 

ಇಂದು ಮಳೆಹಾನಿ ಪ್ರದೇಶಗಳಿಗೆ ಸಚಿವ ಯು.ಟಿ. ಖಾದರ್ ಭೇಟಿ

ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಆಗಸ್ಟ್ 5ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಬೆಳ್ತಂಗಡಿ ತಾಲೂಕಿನ ರೆಖ್ಯಾದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಮನೆಗೆ ಭೇಟಿ ನೀಡಲಿದ್ದು, ಬಳಿಕ ವಿವಿಧ ಮಳೆಹಾನಿ ಪ್ರದೇಶಗಳನ್ನು ವೀಕ್ಷಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಬೆಳ್ತಂಗಡಿ ತಾಲೂಕು ಪಂಚಾಯತ್ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ನಂತರ ಬಂಟ್ವಾಳ ತಾಲೂಕಿನ ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಧ್ಯಾಹ್ನ 2 ಗಂಟೆಗೆ ಬಂಟ್ವಾಳ ತಾಲೂಕು ಪಂಚಾಯತ್‌ನಲ್ಲಿ ಪರಿಶೀಲನಾ ಸಭೆ ನಡೆಸಲಿದ್ದಾರೆ.