ಮಂಗಳೂರು: ಕಾಲೇಜುಗಳಲ್ಲಿ ಮಾದಕವಸ್ತು ಬಳಕೆಯನ್ನು ತಡೆಗಟ್ಟುವ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಕಟ್ಟುನಿಟ್ಟಿನ ನಿಗಾ ಮತ್ತು ತಪಾಸಣೆ ನಡೆಸುತ್ತಿದ್ದ ವೇಳೆ ಕಾಲೇಜು ಆವರಣದಲ್ಲಿ ಸುಮಾರು 290 ಗ್ರಾಂ ಗಾಂಜಾವನ್ನು ಸಣ್ಣ ಸಣ್ಣ ಪ್ಯಾಕೆಟ್‌ಗಳಲ್ಲಿ ಪತ್ತೆಹಚ್ಚಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.
ಕಾಲೇಜು ಆಡಳಿತದಿಂದ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಂಜಾವನ್ನು ವಶಪಡಿಸಿಕೊಂಡು ಸಂಬಂಧಿತ ವಿದ್ಯಾರ್ಥಿಗಳ ವೈದ್ಯಕೀಯ ಪರೀಕ್ಷೆ ನಡೆಸಿದರು. ಪರೀಕ್ಷಾ ವರದಿಯಲ್ಲಿ ಮೂವರು ವಿದ್ಯಾರ್ಥಿಗಳು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.
ಈ ಪ್ರಕರಣದ ಸಂಬಂಧ ಎನ್‌ಡಿಪಿಎಸ್ (NDPS) ಕಾಯ್ದೆಯ ಸೆಕ್ಷನ್ 8(c) ಹಾಗೂ 27(b) ಸೇರಿದಂತೆ ವಿವಿಧ ವಿಧಿಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಕಾಲೇಜಿಗೆ ಗಾಂಜಾವನ್ನು ತಂದಿದ್ದಾನೆ ಎನ್ನಲಾದ ವಿದ್ಯಾರ್ಥಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಪ್ರಕರಣದ ಸನ್ನಿವೇಶ ಹಾಗೂ ವಿದ್ಯಾರ್ಥಿಯ ಶೈಕ್ಷಣಿಕ ಹಿನ್ನೆಲೆಯನ್ನು ಪರಿಗಣಿಸಿದ ನ್ಯಾಯಾಲಯ ಶೂರಿಟಿ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದೆ.
ಇನ್ನೊಂದೆಡೆ, ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡಿದ್ದಾನೆ ಎನ್ನಲಾದ ಪೆಡ್ಲರ್‌ನ ಪತ್ತೆಗೆ ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.
ಶೈಕ್ಷಣಿಕ ಸಂಸ್ಥೆಗಳಲ್ಲಿ ಮಾದಕವಸ್ತು ವಿರುದ್ಧ ಜಾಗೃತಿ ಮೂಡಿಸುವ ಅಭಿಯಾನಗಳ ಜೊತೆಗೆ ನಿಯಮಿತ ತಪಾಸಣೆ ನಡೆಸುತ್ತಿರುವುದು ಸಕಾರಾತ್ಮಕ ಬೆಳವಣಿಗೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಹಲವು ಕಾಲೇಜುಗಳ ಆಂಟಿ ಡ್ರಗ್ ಸಮಿತಿಗಳು (ADC) ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೇ ಮಾದರಿಯ ಕ್ರಮಗಳನ್ನು ಎಲ್ಲಾ ಶಿಕ್ಷಣ ಸಂಸ್ಥೆಗಳು ಅನುಸರಿಸಿದರೆ ಮಾದಕವಸ್ತು ಮುಕ್ತ ಮತ್ತು ಸುರಕ್ಷಿತ ಕ್ಯಾಂಪಸ್ ನಿರ್ಮಾಣಕ್ಕೆ ನೆರವಾಗಲಿದೆ ಎಂದು ಹೇಳಲಾಗುತ್ತಿದೆ.





