06 August 2026 |

ಉತ್ತಮ ಮಳೆಯಿಂದ ಕರಾವಳಿಯಲ್ಲಿ ಭತ್ತ ಬಿತ್ತನೆಗೆ ವೇಗ; ರೈತರಲ್ಲಿ ಹೆಚ್ಚಿದ ನಿರೀಕ್ಷೆ

  • 05 Aug 2026 12:55:43 PM

ಮಂಗಳೂರು: ಕಳೆದ ಎರಡು ವಾರಗಳಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭತ್ತದ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಜೂನ್ ಹಾಗೂ ಜುಲೈ ಆರಂಭದಲ್ಲಿ ಮಳೆಯ ಕೊರತೆಯಿಂದ ಸಂಕಷ್ಟದಲ್ಲಿದ್ದ ರೈತರಿಗೆ ಇದೀಗ ನೆಮ್ಮದಿ ದೊರೆತಿದ್ದು, ಹೊಲಗಳಲ್ಲಿ ಕೃಷಿ ಚಟುವಟಿಕೆಗಳು ವೇಗ ಪಡೆದಿವೆ.

 

ಜುಲೈ 20ರವರೆಗೆ ಬಹುತೇಕ ಕಡೆಗಳಲ್ಲಿ ಬಿತ್ತನೆ ನಿಧಾನಗತಿಯಲ್ಲಿದ್ದರೂ, ಇತ್ತೀಚಿನ ಮಳೆಯ ಪರಿಣಾಮ ಹೆಚ್ಚಿನ ರೈತರು ತಮ್ಮ ನಾಟಿ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7,976 ಹೆಕ್ಟೇರ್ ಹಾಗೂ ಉಡುಪಿ ಜಿಲ್ಲೆಯಲ್ಲಿ 24,514 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆ ನಡೆದಿದೆ.

 

ಕಳೆದ ವರ್ಷದ ಇದೇ ಅವಧಿಯಲ್ಲಿ ದಕ್ಷಿಣ ಕನ್ನಡದಲ್ಲಿ 9,264 ಹೆಕ್ಟೇರ್ ಮತ್ತು ಉಡುಪಿ ಜಿಲ್ಲೆಯಲ್ಲಿ 25,244 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿತ್ತು. ಈ ಬಾರಿ ಮಳೆಯ ವಿಳಂಬದಿಂದ ಕಳೆದ ವರ್ಷಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಬಿತ್ತನೆ ನಡೆದಿದ್ದರೂ, ಉತ್ತಮ ಮಳೆಯೊಂದಿಗೆ ರೈತರು ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ.

 

ಜೂನ್ ಅಂತ್ಯದ ವೇಳೆಗೆ ದಕ್ಷಿಣ ಕನ್ನಡದಲ್ಲಿ ಕೇವಲ 164 ಹೆಕ್ಟೇರ್ ಹಾಗೂ ಉಡುಪಿಯಲ್ಲಿ 1,503 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿತ್ತು. ಆದರೆ ಕಳೆದ ಹತ್ತು ದಿನಗಳಿಂದ ಸುರಿದ ಮಳೆಯು ಕೃಷಿ ಚಟುವಟಿಕೆಗೆ ಹೊಸ ಚೈತನ್ಯ ತುಂಬಿದೆ.

 

ಕರಾವಳಿ ಭಾಗದ ರೈತರು ಸಾಮಾನ್ಯವಾಗಿ ಜೂನ್ ತಿಂಗಳಲ್ಲೇ ಬಿತ್ತನೆ ಪೂರ್ಣಗೊಳಿಸುವುದಿಲ್ಲ. ಮುಂಚಿತವಾಗಿ ಬೇಸಾಯ ಮಾಡಿದರೆ ಕೊಯ್ಲಿನ ವೇಳೆಯಲ್ಲಿ ಮಳೆ ಅಡ್ಡಿಯಾಗುವ ಸಾಧ್ಯತೆ ಇರುವುದರಿಂದ ಹೆಚ್ಚಿನವರು ಜುಲೈ ತಿಂಗಳಲ್ಲೇ ಬಿತ್ತನೆ ಆರಂಭಿಸುತ್ತಾರೆ. ಈ ಬಾರಿ ಮಳೆ ಆರಂಭವಾದ ತಕ್ಷಣವೇ ಹಲವರು ಗದ್ದೆ ಸಿದ್ಧಪಡಿಸಿ ನೇರ ಬಿತ್ತನೆಗೆ ಮುಂದಾಗಿದ್ದಾರೆ.

 

ಮಳೆಯ ಅನಿಶ್ಚಿತತೆಯನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ಅವಧಿಯಲ್ಲಿ ಕೊಯ್ಲಿಗೆ ಬರುವ ಜ್ಯೋತಿ, ಜಯ ಹಾಗೂ ಕೆಂಪು ಮುಕ್ತಿ ತಳಿಯ ಬೀಜಗಳನ್ನು ಕೃಷಿ ಇಲಾಖೆ ರೈತರಿಗೆ ವಿತರಿಸುತ್ತಿದೆ. ಹಿಂದೆ ಬಳಸುತ್ತಿದ್ದ ಕೆಲವು ತಳಿಗಳಿಗೆ ಸುಮಾರು 150 ದಿನಗಳು ಬೇಕಾಗುತ್ತಿದ್ದರೆ, ಈಗ ವಿತರಿಸಲಾಗುತ್ತಿರುವ ಬೀಜಗಳು ಸುಮಾರು 120 ದಿನಗಳಲ್ಲಿ ಕೊಯ್ಲಿಗೆ ಸಿದ್ಧವಾಗುತ್ತವೆ. ಇದರಿಂದ ಕಡಿಮೆ ಅವಧಿಯ ತಳಿಗಳತ್ತ ರೈತರ ಆಸಕ್ತಿ ಹೆಚ್ಚುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಜುಲೈ 15ರ ನಂತರ ಮಳೆಯ ಪ್ರಮಾಣ ಹೆಚ್ಚಾದ ಪರಿಣಾಮ ಬಿತ್ತನೆ ಕಾರ್ಯ ವೇಗ ಪಡೆದಿದೆ. ಈ ವರ್ಷ ಮಳೆ ತಡವಾಗಿ ಆರಂಭವಾದ ಕಾರಣ ಸಸಿ ಬೆಳೆಸಿ ನಾಟಿ ಮಾಡುವ ಅವಕಾಶ ಕಡಿಮೆಯಾಗಿದ್ದು, ಹೆಚ್ಚಿನ ರೈತರು ನೇರ ಬಿತ್ತನೆ ವಿಧಾನವನ್ನೇ ಅನುಸರಿಸಿದ್ದಾರೆ. ಹಿಂಗಾರು ಮತ್ತು ಮುಂಗಾರು ಎರಡೂ ಬೆಳೆಗಳನ್ನು ಬೆಳೆಯುವ ರೈತರು ಈ ಬಾರಿ ಒಂದು ಬೆಳೆಗಷ್ಟೇ ಹೆಚ್ಚು ಒತ್ತು ನೀಡುವ ಸಾಧ್ಯತೆ ಇದೆ.