ಬೆಂಗಳೂರು: ಕನ್ನಡ ನಟಿ ಹಾಗೂ ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನಾ) ಅವರನ್ನು ಕರ್ನಾಟಕ ಸರ್ಕಾರದ ‘ಋತು ತಾರೆ’ ಜಾಗೃತಿ ಅಭಿಯಾನದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದೆ.
ಮಹಿಳೆಯರ ಆರೋಗ್ಯ, ಮಾಸಿಕ ಋತುಚಕ್ರದ ಬಗ್ಗೆ ಅರಿವು ಮೂಡಿಸುವುದು ಹಾಗೂ ಸಮಾಜದಲ್ಲಿ ಮುಕ್ತ ಸಂವಾದಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಅಭಿಯಾನವನ್ನು ಆರಂಭಿಸಿದೆ.
ಈ ಹಿನ್ನೆಲೆಯಲ್ಲಿ ರಮ್ಯಾ ಅವರು ಅಭಿಯಾನದ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ರಮ್ಯಾ ಅವರ ಮೂಲಕ ರಾಜ್ಯದಾದ್ಯಂತ ಮಹಿಳೆಯರು ಮತ್ತು ಯುವಜನರಿಗೆ ಈ ಅಭಿಯಾನದ ಸಂದೇಶವನ್ನು ತಲುಪಿಸುವ ಉದ್ದೇಶ ಸರ್ಕಾರದ್ದಾಗಿದೆ.
ವಿವಿಧ ಜಾಗೃತಿ ಕಾರ್ಯಕ್ರಮಗಳು, ಸಾರ್ವಜನಿಕ ಅಭಿಯಾನಗಳು ಹಾಗೂ ಸಮುದಾಯ ಆಧಾರಿತ ಚಟುವಟಿಕೆಗಳಲ್ಲಿ ಅವರು ಭಾಗವಹಿಸುವ ನಿರೀಕ್ಷೆಯಿದೆ.





