06 August 2026 |

ಉಳ್ಳಾಲದಲ್ಲಿ ವೃದ್ಧೆಯ ಮೇಲೆ ದಾಳಿ ನಡೆಸಿ ಚಿನ್ನಾಭರಣ ದರೋಡೆ; ₹3 ಲಕ್ಷ ಮೌಲ್ಯದ ಚಿನ್ನ ಲೂಟಿ

  • 05 Aug 2026 07:44:42 PM

ಉಳ್ಳಾಲ: ಬಾಡಿಗೆ ಮನೆ ವಿಚಾರಿಸುವ ನೆಪದಲ್ಲಿ ಮನೆಗೆ ಬಂದಿದ್ದ ಇಬ್ಬರು ಅಪರಿಚಿತರು ವೃದ್ಧೆಯ ಮೇಲೆ ಹಲ್ಲೆ ನಡೆಸಿ, ಸುಮಾರು ₹3 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾದ ಘಟನೆ ಉಳ್ಳಾಲ ತಾಲೂಕಿನ ಕುರ್ನಾಡು ಗ್ರಾಮದ ಕಾಯರಗೋಳಿಯಲ್ಲಿ ನಡೆದಿದೆ.

 

ಕಾಯರಗೋಳಿ ನಿವಾಸಿ ಭವಾನಿ ಅವರು ಆಗಸ್ಟ್ 3ರಂದು ಮಧ್ಯಾಹ್ನ ಸುಮಾರು 1.15ರ ವೇಳೆಗೆ ಮನೆಯಲ್ಲಿ ಒಬ್ಬರೇ ಇದ್ದರು. ಈ ವೇಳೆ ಮನೆ ಬಾಗಿಲು ತಟ್ಟಿದ ಇಬ್ಬರು ಯುವಕರು, ತಾವು ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಬಾಡಿಗೆ ಮನೆ ಹುಡುಕುತ್ತಿದ್ದೇವೆ ಎಂದು ಹೇಳಿ, ಬ್ರಾಹ್ಮಣರಿಗೆ ಮನೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.

 

ಇದಕ್ಕೆ ಭವಾನಿ ಅವರು, "ಮಗ ಮನೆಗೆ ಬಂದ ಬಳಿಕ ಮಾಹಿತಿ ನೀಡುತ್ತೇನೆ" ಎಂದು ಉತ್ತರಿಸಿದ್ದಾರೆ. ಬಳಿಕ ಆರೋಪಿಗಳು ಅವರ ಮಗನ ಮೊಬೈಲ್ ಸಂಖ್ಯೆ ಕೇಳಿದ್ದಾರೆ. ಫೋನ್ ಸಂಪರ್ಕವಾಗದೇ ಇದ್ದ ಕಾರಣ ಭವಾನಿ ಅವರು ಬಾಗಿಲು ಮುಚ್ಚಲು ಮುಂದಾದಾಗ, ಆರೋಪಿಗಳು ಬಲವಂತವಾಗಿ ಬಾಗಿಲು ತಳ್ಳಿ ಮನೆಯೊಳಗೆ ನುಗ್ಗಿದ್ದಾರೆ.

 

ಆಕಸ್ಮಿಕವಾಗಿ ಒಳನುಗ್ಗಿದ ಆರೋಪಿಗಳು ವೃದ್ಧೆಯನ್ನು ಕೆಳಗೆ ತಳ್ಳಿದ್ದು, ಅವರು ಸಹಾಯಕ್ಕಾಗಿ ಕೂಗಲು ಯತ್ನಿಸಿದಾಗ ಒಬ್ಬ ಆರೋಪಿ ಬಾಯಿ ಮುಚ್ಚಿ ಹಿಡಿದಿದ್ದಾನೆ. ಇದೇ ವೇಳೆ ಮತ್ತೊಬ್ಬ ಆರೋಪಿ ಅವರ ಕುತ್ತಿಗೆಯಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಸರ ಹಾಗೂ ಬಲಗೈಯಲ್ಲಿದ್ದ 8 ಗ್ರಾಂ ತೂಕದ ಚಿನ್ನದ ಬಳೆಯನ್ನು ಕಸಿದುಕೊಂಡಿದ್ದಾನೆ. ಎಡಗೈಯಲ್ಲಿದ್ದ ಬಳೆಯನ್ನೂ ಕಸಿದುಕೊಳ್ಳಲು ಯತ್ನಿಸಿದರೂ ಸಾಧ್ಯವಾಗದೆ, ವೃದ್ಧೆಗೆ ಗಾಯಗೊಳಿಸಿ ಹೊರಗಿನಿಂದ ಬಾಗಿಲು ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ.

 

ಈ ದಾಳಿಯಲ್ಲಿ ಭವಾನಿ ಅವರ ಕೈ ಹಾಗೂ ಮಣಿಕಟ್ಟಿಗೆ ಗಾಯಗಳಾಗಿವೆ. ಕಳವಾಗಿರುವ ಚಿನ್ನಾಭರಣದ ಮೌಲ್ಯ ಸುಮಾರು ₹3 ಲಕ್ಷ ಎಂದು ಅಂದಾಜಿಸಲಾಗಿದೆ.

 

ಸುಮಾರು ಅರ್ಧ ಗಂಟೆಯ ಬಳಿಕ ಮಗಳು ಪ್ರತಿಭಾ ಮನೆಗೆ ಬಂದಾಗ ಘಟನೆ ಬಹಿರಂಗಗೊಂಡಿದೆ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.