ಜೀವನವಿಡೀ ಕುಟುಂಬಕ್ಕಾಗಿ ದುಡಿದಿದ್ದ 74 ವರ್ಷದ ಶಿವಚರಣ್ ರತನ್ ಗುಪ್ತಾ ಅವರ ಅಂತಿಮ ಕ್ಷಣಗಳು ಮನಕಲಕುವಂತಾಗಿವೆ. ವೃದ್ಧಾಶ್ರಮದಲ್ಲಿದ್ದ ಅವರು ಕೊನೆಯ ಕ್ಷಣದವರೆಗೂ ತಮ್ಮ ಮಕ್ಕಳಿಗಾಗಿ ಕಾಯುತ್ತಿದ್ದರೂ, ಅವರ ಅಂತ್ಯಸಂಸ್ಕಾರಕ್ಕೆ ಮೂವರು ಪುತ್ರಿಯರೂ ಹಾಜರಾಗಲಿಲ್ಲ.
ವರದಿಗಳ ಪ್ರಕಾರ, ಶಿವಚರಣ್ ರತನ್ ಗುಪ್ತಾ ಅವರು ಹರಿಯಾಣದ ಸೋನಿಪತ್‌ನ ವೃದ್ಧಾಶ್ರಮದಲ್ಲಿ ನಿಧನರಾದರು. ಅವರಿಗೆ ಮೂವರು ಪುತ್ರಿಯರಿದ್ದು, ಮೂವರೂ ಭಾರತದಲ್ಲೇ ಇದ್ದರೂ ತಂದೆಯ ಅಂತ್ಯಕ್ರಿಯೆಗೆ ಯಾರೂ ಆಗಮಿಸಲಿಲ್ಲ ಎನ್ನಲಾಗಿದೆ.
ವೃದ್ಧಾಶ್ರಮದ ಸಿಬ್ಬಂದಿಯೇ ಅಂತ್ಯಸಂಸ್ಕಾರದ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿದರು. ಈ ವೇಳೆ ಪುತ್ರಿಯರು ವಿಡಿಯೊ ಕರೆ ಮೂಲಕ ಅಂತ್ಯಕ್ರಿಯೆಯನ್ನು ವೀಕ್ಷಿಸಿದರೆಂದು ವರದಿಯಾಗಿದೆ. ಅಂತ್ಯಕ್ರಿಯೆಯ ವೆಚ್ಚಕ್ಕಾಗಿ ಹಿರಿಯ ಪುತ್ರಿಯವರು ₹5,100 ಅನ್ನು ಆನ್‌ಲೈನ್ ಮೂಲಕ ಕಳುಹಿಸಿದ್ದಾರೆಯೆಂದು ತಿಳಿದುಬಂದಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ವೃದ್ಧರ ಆರೈಕೆ, ಕುಟುಂಬದ ಜವಾಬ್ದಾರಿ ಹಾಗೂ ಬದಲಾಗುತ್ತಿರುವ ಸಾಮಾಜಿಕ ಮೌಲ್ಯಗಳ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ, ಪುತ್ರಿಯರು ಅಂತ್ಯಕ್ರಿಯೆಗೆ ಏಕೆ ಹಾಜರಾಗಲಿಲ್ಲ ಎಂಬ ಕುರಿತು ಅಧಿಕೃತ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.





