ರಾಷ್ಟ್ರೀಯ ಮಟ್ಟದ ಥ್ರೋಬಾಲ್ ಆಟಗಾರ ಹಾಗೂ ರಕ್ಷಣಾ ತರಬೇತುದಾರರಾಗಿದ್ದ 37 ವರ್ಷದ ಆರ್. ರಾಜೇಶ್ ಅವರು ಮತ್ತೊಬ್ಬರ ಜೀವ ಉಳಿಸುವ ಸಾಹಸದಲ್ಲಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಹೃದಯವಿದ್ರಾವಕ ಘಟನೆ ನಡೆದಿದೆ.
ಲಭ್ಯ ಮಾಹಿತಿಯ ಪ್ರಕಾರ, ಕೇರಳದ ಕಾರ್ಯಂಕೋಡ್ ನದಿಯಲ್ಲಿ ರೈತರೊಬ್ಬರು ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ರಕ್ಷಿಸಲು ರಾಜೇಶ್ ನದಿಗೆ ಧುಮುಕಿದ್ದರು. ರಕ್ಷಣಾ ಕಾರ್ಯಾಚರಣೆಯ ವೇಳೆ ತಮ್ಮ ಬಳಿ ಇದ್ದ ಜೀವ ರಕ್ಷಕ ಜಾಕೆಟ್ ಅನ್ನು ರೈತನಿಗೆ ನೀಡಿ, ಸುರಕ್ಷಿತವಾಗಿ ದಡ ಸೇರಲು ನೆರವಾದರು.
ಆದರೆ, ರಾಜೇಶ್ ಅವರು ನದಿಯ ಪ್ರಬಲ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದು, ಬಳಿಕ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅವರ ಸಮಯಪ್ರಜ್ಞೆ ಮತ್ತು ನಿಸ್ವಾರ್ಥ ಸೇವೆಯಿಂದ ರೈತನ ಜೀವ ಉಳಿದಿದ್ದರೂ, ರಾಜೇಶ್ ತಮ್ಮ ಅಮೂಲ್ಯ ಜೀವವನ್ನೇ ಕಳೆದುಕೊಂಡಿದ್ದಾರೆ.
ರಾಜೇಶ್ ಅವರ ಅಂತಿಮ ದರ್ಶನದ ವೇಳೆ ಮನಕಲಕುವ ದೃಶ್ಯವೊಂದು ಕಂಡುಬಂತು. ಅವರ ಪುತ್ರರಾದ ಅರ್ಷನ್ ಹಾಗೂ ಅಭಿಷೇಕ್ ಶವಪೆಟ್ಟಿಗೆಯನ್ನು ಅಪ್ಪಿಕೊಂಡು ಕಣ್ಣೀರು ಹಾಕುತ್ತಾ, “ಅಪ್ಪನ ಮುಖವನ್ನು ಒಮ್ಮೆ ನೋಡಬೇಕು… ದಯವಿಟ್ಟು ಬಟ್ಟೆ ತೆಗೆಯಿರಿ ಸರ್” ಎಂದು ಮನವಿ ಮಾಡುತ್ತಿರುವ ದೃಶ್ಯ ಅಲ್ಲಿದ್ದವರ ಕಣ್ಣನ್ನೂ ತೇವಗೊಳಿಸಿತು.
ರಾಜೇಶ್ ಅವರ ಈ ನಿಸ್ವಾರ್ಥ ತ್ಯಾಗಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಕರ್ತವ್ಯನಿಷ್ಠೆ, ಮಾನವೀಯತೆ ಮತ್ತು ಧೈರ್ಯಕ್ಕೆ ಅವರು ಮಾದರಿಯಾಗಿದ್ದಾರೆ ಎಂದು ಹಲವರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.





