ನವದೆಹಲಿ: ಆಗಸ್ಟ್ 7ರಂದು ಆಚರಿಸಲಾಗುವ ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ವಿಶೇಷ ಕರೆ ನೀಡಿದ್ದಾರೆ. ಭಾರತದ ವೈವಿಧ್ಯಮಯ ಕೈಮಗ್ಗ ಪರಂಪರೆಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ನೆಚ್ಚಿನ ಕೈಮಗ್ಗ ಉತ್ಪನ್ನಗಳನ್ನು ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೊ ಸಂದೇಶದಲ್ಲಿ, ಕೈಮಗ್ಗ ಉಡುಪು ಧರಿಸಿ GRWM (Get Ready With Me) ಶೈಲಿಯ ವಿಡಿಯೊಗಳು ಸೇರಿದಂತೆ ತಮ್ಮ ನೆಚ್ಚಿನ ಕೈಮಗ್ಗ ಉತ್ಪನ್ನಗಳೊಂದಿಗೆ ವಿಡಿಯೊಗಳನ್ನು ಹಂಚಿಕೊಳ್ಳುವಂತೆ ಪ್ರಧಾನಿ ಕರೆ ನೀಡಿದ್ದಾರೆ. ಜೊತೆಗೆ, #NationalHandloomDay ಹ್ಯಾಶ್‌ಟ್ಯಾಗ್ ಬಳಸುವಂತೆ ಅವರು ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಕೈಮಗ್ಗ ದಿನವನ್ನು ಪ್ರತಿವರ್ಷ ಆಗಸ್ಟ್ 7ರಂದು ಆಚರಿಸಲಾಗುತ್ತದೆ. ಭಾರತದ ಶ್ರೀಮಂತ ಕೈಮಗ್ಗ ಪರಂಪರೆಯನ್ನು ಸಂರಕ್ಷಿಸುವುದು, ನೇಕಾರರ ಪರಿಶ್ರಮಕ್ಕೆ ಗೌರವ ಸಲ್ಲಿಸುವುದು ಹಾಗೂ ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಭಾಗವಹಿಸುವ ಮೂಲಕ ಭಾರತದ ಕೈಮಗ್ಗ ಪರಂಪರೆಗೆ ಹೊಸ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.





