21 September 2026 |

ಉಡುಪಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ; ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದವನ ಕಾಲಿಗೆ ಗುಂಡು

  • 08 Aug 2026 11:56:48 AM

ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಮುದುರಂಗಡಿ ಪೇಟೆಯಲ್ಲಿ ಹಾಡಹಗಲೇ ನಡೆದ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜ (55) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಹಣಕಾಸಿನ ವಿವಾದವೇ ಕೊಲೆ ಕೃತ್ಯದ ಹಿಂದಿನ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

 

ಆಗಸ್ಟ್ 7ರಂದು ಮಧ್ಯಾಹ್ನ ಸುಮಾರು 3.45ಕ್ಕೆ ಮುದುರಂಗಡಿಯ ಸೇಂಟ್ ಕ್ಸೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿರುವ ಪ್ರಿನ್ಸ್ ಎಂಟರ್‌ಪ್ರೈಸಸ್ ಕಚೇರಿಗೆ ಡೇವಿಡ್ ಡಿಸೋಜ ಅವರು ಆಗಮಿಸಿದ್ದರು. ತಮ್ಮ ಥಾರ್ ವಾಹನದ ಚಾಲಕನ ಬದಿಯ ಬಾಗಿಲಿನತ್ತ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

 

ಗುಂಡು ತಲೆಗೆ ತಗುಲಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಡೇವಿಡ್ ಡಿಸೋಜ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ಶಿರ್ವ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದರು.

 

ತನಿಖೆಯ ವೇಳೆ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಮೂವರು ಆರೋಪಿಗಳು ಬಸ್ ಮೂಲಕ ಭಟ್ಕಳದತ್ತ ತೆರಳುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬೈಂದೂರಿನ ಒತ್ತಿನೆಣೆ ಬಳಿ ಪೊಲೀಸರು ಬಸ್‌ನ್ನು ತಡೆದು ಆರೋಪಿಗಳನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.

 

ಈ ವೇಳೆ ಆರೋಪಿಗಳು ಬಸ್‌ನಿಂದ ಇಳಿದು ಪರಾರಿಯಾಗಲು ಯತ್ನಿಸಿದ್ದಾರೆ ಎನ್ನಲಾಗಿದೆ. ಅವರ ಬೆನ್ನಟ್ಟುವ ಸಂದರ್ಭದಲ್ಲಿ ರಾಜು (42) ಎಂಬ ಆರೋಪಿ ಕಾಪು ಪಿಎಸ್‌ಐ ತೇಜಸ್ವಿ ಅವರನ್ನು ತಳ್ಳಿಹಾಕಿ, ಪೊಲೀಸರ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಈ ವೇಳೆ ಆತ್ಮರಕ್ಷಣೆಗಾಗಿ ಕಾಪು ಪಿಎಸ್‌ಐ ತೇಜಸ್ವಿ ಅವರು ಸರ್ವೀಸ್ ಪಿಸ್ತೂಲಿನಿಂದ ರಾಜುವಿನ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ಬಳಿಯಿದ್ದ ಪಿಸ್ತೂಲ್‌ನ್ನೂ ವಶಪಡಿಸಿಕೊಂಡಿದ್ದಾರೆ.

 

ರಾಜು ಉತ್ತರ ಪ್ರದೇಶದ ಥಾನಾ ಪಿಲ್ವಾ ಮೂಲದವನು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಪಿಎಸ್‌ಐ ತೇಜಸ್ವಿ ಅವರಿಗೂ ಗಾಯಗಳಾಗಿದ್ದು, ಉಡುಪಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜುವಿಗೂ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ.

 

ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದ ಇನ್ನುಳಿದ ಇಬ್ಬರು ಆರೋಪಿಗಳಾದ ಉತ್ತರಾಖಂಡ ಮೂಲದ ಅಜಯ್ ರಾಸ್ತೋಗಿ ಅಲಿಯಾಸ್ ಅನ್ಮೋಲ್ (23) ಹಾಗೂ ಬಿಹಾರ ಮೂಲದ ಜಿಯಾಹುಲ್ ವಜುಲ್ ಶೇಖ್ ಅಲಿಯಾಸ್ ದೀಪಕ್ (38) ಅವರನ್ನು ಪೊಲೀಸರು ಬಂಧಿಸಿದ್ದಾರೆ.

 

ಅಜಯ್ ರಾಸ್ತೋಗಿಯನ್ನು ಕುಮಟಾ ಪೊಲೀಸರ ಸಹಕಾರದೊಂದಿಗೆ ಕುಮಟಾದಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದ್ದು, ದೀಪಕ್‌ನನ್ನು ಭಟ್ಕಳ ಪೊಲೀಸರ ಸಹಕಾರದೊಂದಿಗೆ ಭಟ್ಕಳದಲ್ಲಿ ಬಂಧಿಸಲಾಗಿದೆ.

 

ಈ ಮೂಲಕ ಡೇವಿಡ್ ಡಿಸೋಜ ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದರೆನ್ನಲಾದ ಮೂವರು ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. ಪ್ರಕರಣದ ಹಿನ್ನೆಲೆ, ಹಣಕಾಸಿನ ವಿವಾದದ ವಿಚಾರ ಹಾಗೂ ಕೊಲೆಯ ಹಿಂದಿರುವ ಇತರ ಕಾರಣಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.