ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದ ಕಾನತ್ತಡ್ಕದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರಿನ ಕುರಿತು ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಆ.9ರಂದು ಸಂಜೆ ಕಾನತ್ತಡ್ಕ ಪ್ರದೇಶದಲ್ಲಿ ಅನುಮಾನಾಸ್ಪದ ಕಾರೊಂದು ಇರುವ ಬಗ್ಗೆ ವಿಟ್ಲ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ಅವರಿಗೆ ಮಾಹಿತಿ ಬಂದಿತ್ತು. ತಕ್ಷಣ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದಾಗ, ನಾಗರಾಜ ಕೆ. (32) ಎಂಬವರ ಮನೆಯ ಆವರಣದಲ್ಲಿ KA-17-N-7443 ನೋಂದಣಿ ಸಂಖ್ಯೆಯ ಕಾರು ಪತ್ತೆಯಾಗಿದೆ.
ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಮನೆಯ ಜಗಲಿಯಲ್ಲಿ ನಾಲ್ವರು ವ್ಯಕ್ತಿಗಳು ಕುಳಿತಿರುವುದು ಕಂಡುಬಂದಿದೆ. ವಿಚಾರಣೆ ನಡೆಸಿದಾಗ ಅವರು ಮನೆಯ ಮಾಲೀಕ ನಾಗರಾಜ ಕೆ., ಕೊಲ್ನಾಡು ನಿವಾಸಿ ಕುಮಾರ್ ಕೃಷ್ಣ (27), ಕೇಪು ನಿವಾಸಿ ಅಬ್ದುಲ್ ಜಲೀಲ್ (40) ಹಾಗೂ ವಿಟ್ಲ ಕಸಬಾ ನಿವಾಸಿ ಅಬ್ದುಲ್ ಖಾದರ್ ಯು. (31) ಎಂದು ಗುರುತಿಸಲಾಗಿದೆ.
ವಿಚಾರಣೆ ವೇಳೆ ನಾಲ್ವರೂ ಕಾರಿನಲ್ಲಿ ಗಾಂಜಾ ತಂದು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮಾದಕ ವಸ್ತು ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 173/2026ರಂತೆ ಎನ್‌ಡಿಪಿಎಸ್ ಕಾಯ್ದೆ–1985ರ ಕಲಂ 27(b) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.





