ಸುರತ್ಕಲ್: ಕೃಷ್ಣಾಪುರ 6ನೇ ಬ್ಲಾಕ್‌ನಲ್ಲಿ ಸೋಮವಾರ ಸಂಜೆ ನಡೆದ ದುರ್ಘಟನೆಯಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಕೃಷ್ಣಾಪುರ ಚಕ್ರವರ್ತಿ ಕ್ರೀಡಾಂಗಣದ ಸಮೀಪದ ನಿವಾಸಿ ಭಾಸ್ಕರ್ ಎಂದು ಗುರುತಿಸಲಾಗಿದೆ.
ಕೃಷ್ಣಾಪುರ 6ನೇ ಬ್ಲಾಕ್‌ನ ‘ಜಿಮ್ ಇಟ್ಬಾಲ್’ ಅವರಿಗೆ ಸೇರಿದ ಫ್ಲ್ಯಾಟ್‌ನಲ್ಲಿ ತಗಡು ಶೀಟ್‌ನ ಮೇಲ್ಛಾವಣಿ ನಿರ್ಮಿಸುವ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಭಾಸ್ಕರ್ ಅವರು ಕಬ್ಬಿಣದ ರಾಡ್ ಬಳಸಿ ಮೇಲ್ಛಾವಣಿಯ ಅಳತೆ ಕಾರ್ಯದಲ್ಲಿ ತೊಡಗಿದ್ದರು.
ಅಳತೆ ಪೂರ್ಣಗೊಂಡ ಬಳಿಕ ಕಬ್ಬಿಣದ ರಾಡ್ ಹಿಡಿದು ತಿರುಗಿಸುವ ಸಂದರ್ಭದಲ್ಲಿ, ಕಟ್ಟಡದ ಪಕ್ಕದ ರಸ್ತೆಯಲ್ಲಿ ಹಾದುಹೋಗಿದ್ದ ಹೈಟೆನ್ಷನ್ ವಿದ್ಯುತ್ ತಂತಿಗೆ ರಾಡ್ ಆಕಸ್ಮಿಕವಾಗಿ ತಗುಲಿದೆ. ಇದರಿಂದ ರಾಡ್ ಮೂಲಕ ವಿದ್ಯುತ್ ಪ್ರವಹಿಸಿ ಭಾಸ್ಕರ್ ಅವರಿಗೆ ತೀವ್ರ ವಿದ್ಯುತ್ ಆಘಾತ ಉಂಟಾಗಿದೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಸುರತ್ಕಲ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.





