ವಿಟ್ಲ: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ಶಾಲಾ ಬಸ್‌ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ವಿಟ್ಲ ಪಡೂರು ಗ್ರಾಮದ ಪೂರ್ಲಪ್ಪಾಡಿ ಸಮೀಪದ ಕುಂಟುಕುಡೇಲು ಬಳಿ ನಡೆದಿದೆ.
ವಿಟ್ಲದ ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಕುಂಟುಕುಡೇಲು ಇಳಿಜಾರು ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಏಕಾಏಕಿ ತಾಂತ್ರಿಕ ದೋಷಕ್ಕೆ ಒಳಗಾಗಿದೆ. ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ಇಳಿಜಾರಿನಲ್ಲಿ ಕೆಳಭಾಗದತ್ತ ಚಲಿಸಿದೆ. ಬಳಿಕ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ ಹೊಡೆದಿದೆ.
ಘಟನೆಯ ಸಂದರ್ಭ ಬಸ್‌ನಲ್ಲಿ 15ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು. ಅದೃಷ್ಟವಶಾತ್ ಯಾವುದೇ ವಿದ್ಯಾರ್ಥಿಗೆ ಗಾಯವಾಗಿಲ್ಲ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ಡಿಕ್ಕಿಯ ರಭಸಕ್ಕೆ ಶಾಲಾ ಬಸ್‌ಗೆ ಹಾನಿಯಾಗಿದ್ದು, ರಸ್ತೆ ಬದಿಯ ವಿದ್ಯುತ್ ಕಂಬ ಸಂಪೂರ್ಣವಾಗಿ ಮುರಿದು ಬಿದ್ದಿದೆ.





