21 September 2026 |

ಏರ್ ಇಂಡಿಯಾ ವಿಮಾನದ ಕಠಿಣ ಕ್ರಮ: ಎಲ್ಲಾ ಪೈಲಟ್‌ಗಳಿಗೂ ಡ್ರಗ್ ಟೆಸ್ಟ್ ಕಡ್ಡಾಯ

  • 14 Aug 2026 12:34:55 AM

ನವದೆಹಲಿ: ವಿಮಾನ ಹಾರಾಟದ ವೇಳೆ ಮುಖ್ಯ ಪೈಲಟ್ ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ, ಏರ್ ಇಂಡಿಯಾ ತನ್ನ ಎಲ್ಲಾ ಪೈಲಟ್‌ಗಳಿಗೆ ಮಾದಕ ದ್ರವ್ಯ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ವಿಮಾನ ಹಾರಾಟಕ್ಕೂ ಮುನ್ನ ಪೈಲಟ್‌ಗಳು ಯಾವುದೇ ನಿಷೇಧಿತ ಮಾದಕ ವಸ್ತು ಅಥವಾ ಔಷಧ ಸೇವಿಸಿರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ.

 

ಆಗಸ್ಟ್ 4ರಂದು ಫುಕೆಟ್‌ನಿಂದ ದಿಲ್ಲಿಗೆ ತೆರಳುತ್ತಿದ್ದ ಏರ್ ಇಂಡಿಯಾದ AI 2379 ವಿಮಾನವು ಹಾರಾಟದ ಮಧ್ಯೆ ಏಕಾಏಕಿ ಸುಮಾರು 300 ಅಡಿ ಎತ್ತರ ಕಳೆದುಕೊಂಡಿತ್ತು. ಈ ವೇಳೆ ನಾಲ್ವರು ಸಿಬ್ಬಂದಿ ಸೇರಿದಂತೆ ಒಟ್ಟು 24 ಮಂದಿ ಗಾಯಗೊಂಡಿದ್ದರು. ಆರಂಭದಲ್ಲಿ ಈ ಘಟನೆಗೆ ವಾಯು ಪ್ರಕ್ಷುಬ್ಧತೆ ಕಾರಣ ಎಂದು ಏರ್ ಇಂಡಿಯಾ ತಿಳಿಸಿತ್ತು. ಆದರೆ ಬಳಿಕ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ವಿಮಾನದ ಮುಖ್ಯ ಪೈಲಟ್ ಗಾಂಜಾ ಸೇವಿಸಿರುವುದು ಪತ್ತೆಯಾಗಿತ್ತು.

 

ಈ ಘಟನೆ ಬಳಿಕ ಏರ್ ಇಂಡಿಯಾ ತನ್ನ ಸಿಬ್ಬಂದಿಗೆ ಕಳುಹಿಸಿದ ಇಮೇಲ್‌ನಲ್ಲಿ, ನಾಗರಿಕ ವಾಯುಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ನಿಗದಿಪಡಿಸಿರುವ ನಿಯಮಗಳಿಗಿಂತಲೂ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದಾಗಿ ತಿಳಿಸಿದೆ.

 

ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಗ್ರೂಪ್ ಪೈಲಟ್‌ಗಳನ್ನು ಡ್ರಗ್ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಪರೀಕ್ಷೆ ಕಡ್ಡಾಯವಾಗಿದ್ದು, ಆಗಸ್ಟ್ 13ರಿಂದಲೇ ಪ್ರಕ್ರಿಯೆ ಆರಂಭವಾಗಿದೆ ಎಂದು ಸಂಸ್ಥೆ ತಿಳಿಸಿದೆ.

 

ವಿಮಾನಯಾನ ಕ್ಷೇತ್ರದಲ್ಲಿ ಸುರಕ್ಷತೆ ಮತ್ತು ವೃತ್ತಿಪರ ಮಾನದಂಡಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.