ಮಲ್ಪೆ: ಮೀನುಗಾರಿಕೆಗೆ ತೆರಳಿದ್ದ ಬೋಟ್‌ನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದ ಮೀನುಗಾರ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಮಲ್ಪೆ ಬಂದರು ವ್ಯಾಪ್ತಿಯಲ್ಲಿ ನಡೆದಿದೆ.
ಭದ್ರಾವತಿ ತಾಲೂಕಿನ ಬೆಳ್ಳಿಗೇರಿ ಗ್ರಾಮದ ಸಂಜೀವ (33) ಮೃತ ವ್ಯಕ್ತಿ. ಅವರು ಮಲ್ಪೆಯ ‘ರಜತ’ ಹೆಸರಿನ ಮೀನುಗಾರಿಕಾ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಆ. 10ರಂದು ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಸಂಜೀವ, ಆ. 14ರಂದು ಮಧ್ಯಾಹ್ನ ಸುಮಾರು 1.30ರ ವೇಳೆಗೆ ಮೀನು ಹಿಡಿಯಲು ಹಾಕಿದ್ದ ಬಲೆಯನ್ನು ಮೇಲಕ್ಕೆ ಎಳೆಯುತ್ತಿದ್ದರು. ಈ ವೇಳೆ ಏಕಾಏಕಿ ದೊಡ್ಡ ಅಲೆ ಬಂದು ಬೋಟ್ ಅಲುಗಾಡಿದ ಪರಿಣಾಮ ಸಂಜೀವ ಅವರ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ.
ನೀರಿನಲ್ಲಿ ಬಿದ್ದ ಬಳಿಕ ಅವರು ಕಾಣೆಯಾಗಿದ್ದು, ಘಟನೆ ನಡೆದ ಸ್ಥಳದಲ್ಲಿ ಟ್ರಾಲ್ ಬಳಸಿ ಹುಡುಕಾಟ ನಡೆಸಲಾಯಿತು. ಸಂಜೆ ವೇಳೆಗೆ ಸಂಜೀವ ಅವರನ್ನು ಪತ್ತೆಹಚ್ಚಿ ತಕ್ಷಣ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಪರೀಕ್ಷಿಸಿದಾಗ ಅವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.





