21 September 2026 |

ಉಳ್ಳಾಲದ ಲಾಡ್ಜ್‌ಗೆ ಅಪ್ರಾಪ್ತ ಬಾಲಕಿಯರನ್ನು ಕರೆದೊಯ್ದ ಆರೋಪ: ಇಬ್ಬರು ಯುವಕರ ಬಂಧನ

  • 17 Aug 2026 08:12:16 PM

ಕಾಸರಗೋಡು: ಸ್ನ್ಯಾಪ್‌ಚಾಟ್ ಮೂಲಕ ಪರಿಚಯವಾಗಿದ್ದ 14 ಮತ್ತು 16 ವರ್ಷದ ಇಬ್ಬರು ಶಾಲಾ ಬಾಲಕಿಯರನ್ನು ಉಳ್ಳಾಲದ ಲಾಡ್ಜ್‌ಗೆ ಕರೆದೊಯ್ದ ಆರೋಪದ ಮೇರೆಗೆ ಮಂಜೇಶ್ವರ ಮೂಲದ ಇಬ್ಬರು ಯುವಕರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.

 

ಬಂಧಿತರನ್ನು 23 ವರ್ಷದ ರಿಜ್ವಾನ್ ಹಾಗೂ 19 ವರ್ಷದ ಮುಹಮ್ಮದ್ ಸಾದ್ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

ಪೊಲೀಸರ ಪ್ರಕಾರ, ಘಟನೆಗೂ ಸುಮಾರು ಮೂರು ದಿನಗಳ ಮುನ್ನವೇ ಬಾಲಕಿಯರಿಗೆ ಸ್ನ್ಯಾಪ್‌ಚಾಟ್ ಮೂಲಕ ಆರೋಪಿಗಳ ಪರಿಚಯವಾಗಿತ್ತು. ಆಗಸ್ಟ್ 16ರಂದು ಇಬ್ಬರೂ ಆರೋಪಿಗಳು ಕಾರಿನಲ್ಲಿ ಕಾಂಞಂಗಾಡ್‌ಗೆ ಆಗಮಿಸಿ, ಬಾಲಕಿಯರನ್ನು ಅವರ ಮನೆ ಸಮೀಪದಿಂದ ಕರೆದುಕೊಂಡು ಹೋಗಿದ್ದಾರೆ. ಸ್ನೇಹಿತರನ್ನು ಭೇಟಿಯಾಗಲು ತೆರಳುತ್ತಿರುವುದಾಗಿ ಬಾಲಕಿಯರು ಮನೆಯವರಿಗೆ ತಿಳಿಸಿದ್ದರು ಎನ್ನಲಾಗಿದೆ.

 

ಸಂಜೆಯಾದರೂ ಬಾಲಕಿಯರು ಮನೆಗೆ ಮರಳದ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಬೈಲ್ ಫೋನ್ ಟವರ್ ಲೊಕೇಶನ್ ಆಧರಿಸಿ ತನಿಖೆ ನಡೆಸಿದಾಗ, ಬಾಲಕಿಯರು ಕರ್ನಾಟಕ-ಕೇರಳ ಗಡಿ ಭಾಗದ ಉಳ್ಳಾಲದಲ್ಲಿರುವುದು ಪತ್ತೆಯಾಗಿದೆ.

 

ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಉಳ್ಳಾಲದ ಲಾಡ್ಜ್‌ಗೆ ತೆರಳಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಾಲಕಿಯರಿಂದ ಮಾಹಿತಿ ಪಡೆದುಕೊಂಡ ಬಳಿಕ ಪ್ರಕರಣದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.